


ಡೈಲಿವಾರ್ತೆ:18/ಸೆ./2026

ಪಟಾಕಿ ನೆಪದಲ್ಲಿ 13ರ ಬಾಲಕನ ಕಿಡ್ನ್ಯಾಪ್, ಕೊಲೆ: ಹಣಕ್ಕಾಗಿ ಅಮಾನವೀಯ ಕೃತ್ಯ – ಆರೋಪಿ ಬಂಧನ

ಬೆಂಗಳೂರು, ಸೆ.18: ಗಣಪತಿ ಮೆರವಣಿಗೆಗೆ ಪಟಾಕಿ ತರಬೇಕೆಂದು ಹೇಳಿ 13 ವರ್ಷದ ಬಾಲಕನನ್ನು ಕರೆದೊಯ್ದು, ಬಳಿಕ ಹಣಕ್ಕಾಗಿ ಅಪಹರಿಸಿ ಕೊಲೆಗೈದಿರುವ ಅಮಾನವೀಯ ಘಟನೆ ಬೆಂಗಳೂರಿನ ಯಲಹಂಕದ ವಿನಾಯಕನಗರದಲ್ಲಿ ನಡೆದಿದೆ.
ಮೃತ ಬಾಲಕನನ್ನು ಪ್ರಜ್ವಲ್(13) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಾಯಕನಗರ ನಿವಾಸಿ ಭಾಸ್ಕರ್ ರೆಡ್ಡಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಕೃತ್ಯ ಎಸಗುವ ಸಂದರ್ಭದಲ್ಲಿ ಆರೋಪಿ ಮದ್ಯದ ಅಮಲಿನಲ್ಲಿದ್ದ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪಟಾಕಿ ನೆಪದಲ್ಲಿ ಕರೆದೊಯ್ದು ಅಪಹರಣ:
ಗಣಪತಿ ಮೆರವಣಿಗೆಗೆ ಪಟಾಕಿ ತರಬೇಕೆಂದು ಹೇಳಿ ಭಾಸ್ಕರ್ ರೆಡ್ಡಿ ಬಾಲಕ ಪ್ರಜ್ವಲ್‌ನನ್ನು ಬುಧವಾರ ಸಂಜೆ ತನ್ನೊಂದಿಗೆ ಕರೆದೊಯ್ದಿದ್ದ ಎನ್ನಲಾಗಿದೆ. ಬಳಿಕ ಬಾಲಕನನ್ನು ಕಾರಿನಲ್ಲಿ ಇರಿಸಿಕೊಂಡು ಆತನ ಕುಟುಂಬದವರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಅಲ್ಲದೆ, ಬಾಲಕನಿಂದಲೇ ವಿಡಿಯೊ ಮಾಡಿಸಿ ಪೋಷಕರಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಈ ವೇಳೆ ಮದ್ಯದ ಅಮಲಿನಲ್ಲಿದ್ದ ಆರೋಪಿ ಬಾಲಕನ ಮೇಲೆ ಹಲ್ಲೆ ನಡೆಸಿದ್ದು, ಹಾಲೋಬ್ರಿಕ್ಸ್‌ನಿಂದ ಹೊಡೆದು ಕಾರಿನಲ್ಲೇ ಕೊಲೆ ಮಾಡಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ. ಬಳಿಕ ಬಾಲಕನ ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಇರಿಸಿಕೊಂಡು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನ ಡಿಕ್ಕಿ ತೆರೆದ ಪೊಲೀಸರಿಗೆ ಶಾಕ್ :
ಬಾಲಕನ ಮೃತದೇಹದೊಂದಿಗೆ ಆಂಧ್ರಪ್ರದೇಶದತ್ತ ಪರಾರಿಯಾಗುತ್ತಿದ್ದ ಭಾಸ್ಕರ್ ರೆಡ್ಡಿ, ಮಾರ್ಗಮಧ್ಯೆ ಕಾರನ್ನು ಗೋಡೆಗೆ ಡಿಕ್ಕಿ ಹೊಡೆಸಿಕೊಂಡಿದ್ದಾನೆ. ಬಳಿಕ ಬಳ್ಳಾರಿ ಸರ್ವೀಸ್ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಸ್ಥಳೀಯರು ಆತನನ್ನು ಹಿಡಿದಿದ್ದಾರೆ.
ಮಾಹಿತಿ ಪಡೆದ ಚಿಕ್ಕಜಾಲ ಪೊಲೀಸರು ಸ್ಥಳಕ್ಕೆ ತೆರಳಿ ಕಾರನ್ನು ಪರಿಶೀಲಿಸಿದಾಗ ಡಿಕ್ಕಿಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಇದರಿಂದ ಪೊಲೀಸರು ಕೂಡ ಕೆಲಕಾಲ ಆಘಾತಕ್ಕೊಳಗಾದರು.
ಅಪಘಾತದ ಕಥೆ ಕಟ್ಟಿದ್ದ ಆರೋಪಿ:
ಪೊಲೀಸರ ವಿಚಾರಣೆ ವೇಳೆ ಆರೋಪಿ ಆರಂಭದಲ್ಲಿ ತಪ್ಪಿಸಿಕೊಳ್ಳಲು ಸುಳ್ಳು ಕಥೆ ಕಟ್ಟಿದ್ದ ಎನ್ನಲಾಗಿದೆ. ದಾರಿಯಲ್ಲಿ ಬಾಲಕ ಕಾರಿಗೆ ಅಡ್ಡಬಂದು ಮೃತಪಟ್ಟಿದ್ದು, ತನ್ನ ಗೆಳೆಯನ ಸೂಚನೆಯಂತೆ ಮೃತದೇಹವನ್ನು ತೆಗೆದುಕೊಂಡು ಆಂಧ್ರಪ್ರದೇಶದತ್ತ ತೆರಳುತ್ತಿದ್ದುದಾಗಿ ಹೇಳಿಕೊಂಡಿದ್ದ.
ಆದರೆ ಪ್ರಾಥಮಿಕ ತನಿಖೆಯಲ್ಲಿ ಬಾಲಕನ ಸಾವಿನ ಹಿಂದೆ ಭಾಸ್ಕರ್ ರೆಡ್ಡಿಯೇ ಇರುವುದಕ್ಕೆ ಸಾಕ್ಷ್ಯಗಳು ಲಭಿಸಿದ್ದು, ಆತನನ್ನು ಬಂಧಿಸಿ ವಿಚಾರಣೆ ಮುಂದುವರಿಸಲಾಗಿದೆ.
ಪ್ರಕರಣದಲ್ಲಿ ಮತ್ತೋರ್ವ ಆರೋಪಿ ಏಳುಕುಂಡಲ ಎಂಬಾತನ ಹೆಸರು ಕೇಳಿಬಂದಿದ್ದು, ಆತ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಆತನ ಪತ್ತೆಗಾಗಿ ಚಿಕ್ಕಜಾಲ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.