ಡೈಲಿವಾರ್ತೆ:18/ಸೆ./2026

ಮಂಗಳೂರು: ಸಿಎಂ ಕಾರಿಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಯತ್ನ; ಎಸ್‌ಡಿಪಿಐ ಕಾರ್ಯಕರ್ತರು ವಶಕ್ಕೆ

ಮಂಗಳೂರು, ಸೆ.18: ರಾಜ್ಯ ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಯತ್ನಿಸಿದ ಎಸ್‌ಡಿಪಿಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಗರದ ಹಂಪನಕಟ್ಟೆಯಲ್ಲಿ ಗುರುವಾರ ನಡೆದಿದೆ.

ಬಂಟ್ವಾಳದಲ್ಲಿ ಕಳೆದ ವರ್ಷ ಹತ್ಯೆಯಾಗಿದ್ದ ರಹಿಮಾನ್ ಕೊಳ್ತಮಜಲು ಪ್ರಕರಣದಲ್ಲಿ ನ್ಯಾಯ ದೊರಕಿಲ್ಲ ಎಂದು ಆರೋಪಿಸಿ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹತ್ತಕ್ಕೂ ಹೆಚ್ಚು ಕಾರ್ಯಕರ್ತರು ಹಂಪನಕಟ್ಟೆ ರಸ್ತೆಯಲ್ಲಿ ದಿಢೀರ್‌ ಕಪ್ಪು ಬಾವುಟ ಹಿಡಿದು ತೆರಳಿ, ಮುಖ್ಯಮಂತ್ರಿ ಅವರ ಕಾರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಯತ್ನಿಸಿದರು.
ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ಕಳೆದ ವರ್ಷ ಜುಲೈನಲ್ಲಿ ನಡೆದ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ರಹಿಮಾನ್ ಕೊಳ್ತಮಜಲು ಅವರನ್ನು ಹತ್ಯೆ ಮಾಡಲಾಗಿದೆ ಎಂದು ಪ್ರಕರಣದ ತನಿಖೆಯ ಸಂದರ್ಭದಲ್ಲಿ ಆರೋಪಿಸಲಾಗಿತ್ತು. ರಹಿಮಾನ್ ಅವರನ್ನು ಅವರ ಮನೆಯಲ್ಲೇ ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಲಾಗಿತ್ತು.
ಇತ್ತೀಚೆಗೆ ಪ್ರಕರಣದ ಆರೋಪಿಗಳ ಪೈಕಿ ಭರತ್ ಕುಮ್ದೇಲು ಎಂಬಾತನಿಗೆ ನ್ಯಾಯಾಲಯ ಜಾಮೀನು ನೀಡಿತ್ತು.

ಇದನ್ನು ವಿರೋಧಿಸಿರುವ ಎಸ್‌ಡಿಪಿಐ, ಆರೋಪಿಗೆ ಜಾಮೀನು ದೊರೆತಿರುವುದು ಸರ್ಕಾರದ ವೈಫಲ್ಯ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದೆ.
ಪ್ರಕರಣದಲ್ಲಿ ನ್ಯಾಯ ದೊರಕಿಸಿಕೊಡಬೇಕು ಹಾಗೂ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಕಾನೂನು ಪ್ರಕ್ರಿಯೆ ಪರಿಣಾಮಕಾರಿಯಾಗಿ ಮುಂದುವರಿಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.