ಡೈಲಿವಾರ್ತೆ:18/ಸೆ./2026

ಮಂಗಳೂರು: ಜೈಲು ಜಾಮರ್‌ ವಿರುದ್ಧ ಆಕ್ರೋಶ: ಸಚಿವ ಸಂಪುಟ ಸಭೆಗೆ ಮುತ್ತಿಗೆ ಯತ್ನ – ಕೋರ್ಟ್ ಆವರಣದಲ್ಲೇ ವಕೀಲರ ಬಂಧನ

ಮಂಗಳೂರು, ಸೆ.18: ಮಂಗಳೂರು ಜೈಲು ಸುತ್ತಮುತ್ತಲಿನ ಮೊಬೈಲ್ ಜಾಮರ್ ಸಮಸ್ಯೆ ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಗೆ ಮುತ್ತಿಗೆ ಹಾಕಲು ಮುಂದಾದ ವಕೀಲರನ್ನು ಪೊಲೀಸರು ಕೋರ್ಟ್ ಆವರಣದಲ್ಲೇ ವಶಕ್ಕೆ ಪಡೆದ ಘಟನೆ ಶುಕ್ರವಾರ ನಡೆದಿದೆ.

ಮಂಗಳೂರಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿದ್ದ ವಕೀಲರು, ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೇಣವ ನೇತೃತ್ವದಲ್ಲಿ ಪಡೀಲ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಅಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ನ್ಯಾಯಾಲಯದ ಆವರಣದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ಜಾಥಾಕ್ಕೆ ಪೊಲೀಸರು ಅನುಮತಿ ನೀಡಿರಲಿಲ್ಲ. ಆದರೂ ಪ್ರತಿಭಟನಾ ಜಾಥಾ ನಡೆಸಲು ವಕೀಲರು ಮುಂದಾದ ಹಿನ್ನೆಲೆಯಲ್ಲಿ, ಅವರು ಕೋರ್ಟ್ ಆವರಣದಿಂದ ಹೊರಬರುವ ಮೊದಲೇ ಪೊಲೀಸರು ತಡೆದರು. ಈ ವೇಳೆ ಪೊಲೀಸರು ಹಾಗೂ ವಕೀಲರ ನಡುವೆ ತಳ್ಳಾಟ, ಜಟಾಪಟಿ ನಡೆದಿದ್ದು, ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಮಂಗಳೂರು ಜೈಲು ಸುತ್ತಮುತ್ತಲಿನ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ಜಾಮರ್‌ನಿಂದ ಉಂಟಾಗುತ್ತಿರುವ ಸಮಸ್ಯೆ ಕಳೆದ ಎರಡು ವರ್ಷಗಳಿಂದ ಮುಂದುವರಿದಿದೆ. ಈ ಕುರಿತು ಪ್ರತಿಭಟನೆಗಳು ಹಾಗೂ ಹೈಕೋರ್ಟ್ ಮಟ್ಟದಲ್ಲಿಯೂ ಹೋರಾಟ ನಡೆದಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ವಕೀಲರು ಆರೋಪಿಸಿದ್ದಾರೆ.

ಸಚಿವ ಸಂಪುಟ ಸಭೆ ಮಂಗಳೂರಿನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆಯನ್ನು ನೇರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಶೀಘ್ರ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಜಗದೀಶ್ ಶೇಣವ ನೇತೃತ್ವದಲ್ಲಿ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲು ವಕೀಲರು ನಿರ್ಧರಿಸಿದ್ದರು. ಕೋರ್ಟ್ ಆವರಣದಿಂದ ಪಡೀಲ್‌ನ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಚಿವ ಸಂಪುಟ ಸಭೆಗೆ ಮುತ್ತಿಗೆ ಹಾಕುವುದು ಅವರ ಯೋಜನೆಯಾಗಿತ್ತು.
ಸುಮಾರು 300 ಮಂದಿ ವಕೀಲರು ಜಾಥಾದಲ್ಲಿ ಭಾಗವಹಿಸಲಿದ್ದಾರೆ ಎಂದು ಜಗದೀಶ್ ಶೇಣವ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಿದ್ದರು. ಮುತ್ತಿಗೆ ನಡೆಸಿಯೇ ತೀರುವುದಾಗಿ ಅವರು ಹೇಳಿಕೆ ನೀಡಿದ್ದರಿಂದ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿತ್ತು.

ಕೋರ್ಟ್ ಆವರಣದಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆಗೆ ಸಜ್ಜಾಗಿದ್ದ ವಕೀಲರನ್ನು ಪೊಲೀಸರು ಅಲ್ಲಿಯೇ ವಶಕ್ಕೆ ಪಡೆದು ಪೊಲೀಸ್ ಬಸ್‌ಗಳಲ್ಲಿ ಕರೆದೊಯ್ದರು. ಜೈಲು ಜಾಮರ್ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ವಕೀಲರು ನಡೆಸಲು ಮುಂದಾಗಿದ್ದ ಪ್ರತಿಭಟನಾ ಜಾಥಾ, ಕೋರ್ಟ್ ಆವರಣದಲ್ಲಿಯೇ ಪೊಲೀಸರ ತಡೆ ಮತ್ತು ವಶಕ್ಕೆ ಪಡೆಯುವ ಕ್ರಮದೊಂದಿಗೆ ಅಂತ್ಯಗೊಂಡಿತು.