ಡೈಲಿವಾರ್ತೆ:18/ಸೆ./2026

ಕರ್ನಾಟಕದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ತುಳು: ಮಂಗಳೂರಿನ ಸಂಪುಟ ಸಭೆಯಲ್ಲಿ ಐತಿಹಾಸಿಕ ತೀರ್ಮಾನ

ಮಂಗಳೂರು: ದಶಕಗಳ ಬೇಡಿಕೆಗೆ ರಾಜ್ಯ ಸರ್ಕಾರ ಕೊನೆಗೂ ಮನ್ನಣೆ ನೀಡಿದ್ದು, ತುಳು ಭಾಷೆಯನ್ನು ಕರ್ನಾಟಕದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸಲು ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ.
ಮಂಗಳೂರಿನಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಈ ನಿರ್ಧಾರವನ್ನು ಪ್ರಕಟಿಸಿದರು.

ಎರಡು ಸಾವಿರ ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ತುಳು ಭಾಷೆ ಪಂಚ ದ್ರಾವಿಡ ಭಾಷೆಗಳ ಪೈಕಿ ಪ್ರಮುಖ ಭಾಷೆಯಾಗಿದ್ದು, ಕರಾವಳಿಯ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ತುಳು ಭಾಷೆಯ ಸರ್ವತೋಮುಖ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ಬಳಕೆಗೆ ಅವಕಾಶ ಕಲ್ಪಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕರಾವಳಿ ಭಾಗದಲ್ಲಿ ಕೇಳಿಬರುತ್ತಿತ್ತು.
ಈ ಹಿನ್ನೆಲೆಯಲ್ಲಿ ತಜ್ಞರು ಹಾಗೂ ಅಧಿಕಾರಿಗಳಿಂದ ಪಡೆದ ವರದಿಗಳನ್ನು ಪರಿಗಣಿಸಿರುವ ಸಚಿವ ಸಂಪುಟ, ಆಡಳಿತದಲ್ಲಿ ಕನ್ನಡದ ಜೊತೆಗೆ ತುಳು ಭಾಷೆಯನ್ನು ಸರ್ಕಾರಿ ಉದ್ದೇಶಗಳಿಗಾಗಿ ಹೆಚ್ಚುವರಿ ಆಡಳಿತ ಭಾಷೆಯಾಗಿ ಬಳಸಲು ಅಂತಿಮ ಅನುಮೋದನೆ ನೀಡಿದೆ.

ಹೊಸ ನಿರ್ಧಾರವು ಮುಖ್ಯವಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳಲಿದ್ದು, ಅನುಷ್ಠಾನದ ಜವಾಬ್ದಾರಿಯನ್ನು ಜಿಲ್ಲಾಡಳಿತಕ್ಕೆ ವಹಿಸಲಾಗಿದೆ. ಸರ್ಕಾರಿ ವ್ಯವಹಾರಗಳಲ್ಲಿ ತುಳು ಭಾಷೆಯ ಬಳಕೆ, ಅಗತ್ಯ ಅನುವಾದ ಕಾರ್ಯಗಳು ಹಾಗೂ ಸಿಬ್ಬಂದಿಗೆ ತರಬೇತಿ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಸರ್ಕಾರವು ಪ್ರತಿ ವರ್ಷ ₹82 ಲಕ್ಷ ಅನುದಾನ ಕಾಯ್ದಿರಿಸಲು ನಿರ್ಧರಿಸಿದೆ.

ತುಳು ಭಾಷೆಗೆ ಆಡಳಿತಾತ್ಮಕ ಮಾನ್ಯತೆ ನೀಡಿರುವ ಈ ನಿರ್ಧಾರವು ಕರಾವಳಿ ಭಾಗದ ಭಾಷಾ ಚಳವಳಿಗೆ ಮಹತ್ವದ ಬೆಳವಣಿಗೆಯಾಗಿದೆ. ಸರ್ಕಾರದ ಘೋಷಣೆಯ ಬೆನ್ನಲ್ಲೇ ತುಳು ಭಾಷಾ ಹೋರಾಟಗಾರರು, ಸಂಘ-ಸಂಸ್ಥೆಗಳು ಹಾಗೂ ಭಾಷಾಭಿಮಾನಿಗಳಿಂದ ಸಂತಸ ವ್ಯಕ್ತವಾಗಿದೆ