ಡೈಲಿವಾರ್ತೆ:19/ಸೆ./2026

ಉಡುಪಿ ಜಿಲ್ಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಗುತ್ತಿಗೆದಾರರು: ₹1,205.99 ಕೋಟಿ ಕಾಮಗಾರಿ ಬಿಲ್ ಬಾಕಿ – ಅಭಿವೃದ್ಧಿಗೆ ಬ್ರೇಕ್, ತಕ್ಷಣ ಬಿಲ್ ಪಾವತಿಗೆ ಸಿಎಂಗೆ ಮನವಿ

ಬ್ರಹ್ಮಾವರ, ಸೆ.19: ಉಡುಪಿ ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ನಿಗಮಗಳ ವ್ಯಾಪ್ತಿಯಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬರೋಬ್ಬರಿ ₹1,205.99 ಕೋಟಿ ಮೊತ್ತದ ಬಿಲ್‌ಗಳು ಪಾವತಿಯಾಗದೆ ಬಾಕಿ ಉಳಿದಿದ್ದು, ಇದರಿಂದ ಅಭಿವೃದ್ಧಿ ಕಾಮಗಾರಿಗಳು ಮಾತ್ರವಲ್ಲದೆ ಜಿಲ್ಲೆಯ ಆರ್ಥಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ ಎಂದು ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘ ಆರೋಪಿಸಿದೆ.

ಈ ಹಿನ್ನೆಲೆಯಲ್ಲಿ ಬಾಕಿ ಇರುವ ಬಿಲ್‌ಗಳನ್ನು ತಕ್ಷಣ ಬಿಡುಗಡೆ ಮಾಡಿ ಅಭಿವೃದ್ಧಿ ಕಾಮಗಾರಿಗಳಿಗೆ ಮರುಚಾಲನೆ ನೀಡುವಂತೆ ಸಂಘದ ಪ್ರಮುಖರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹೆಬ್ರಿಯಲ್ಲಿ ಮನವಿ ಸಲ್ಲಿಸಿದರು.

ಇದಕ್ಕೂ ಮುನ್ನ ಬ್ರಹ್ಮಾವರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಉಪ್ಪುಂದ ಗೋಕುಲದಾಸ್ ಶೆಟ್ಟಿ, ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಒಟ್ಟು ₹1,205.99 ಕೋಟಿ ಮೊತ್ತದ ಬಿಲ್‌ಗಳು ಬಾಕಿ ಉಳಿದಿವೆ ಎಂದು ತಿಳಿಸಿದರು.

ಲೋಕೋಪಯೋಗಿ ಇಲಾಖೆಯಲ್ಲಿ ₹189.86 ಕೋಟಿ, ವಾರಾಹಿ ಯೋಜನಾ ವಿಭಾಗದಲ್ಲಿ ₹322.42 ಕೋಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ₹4.92 ಕೋಟಿ, ಸಣ್ಣ ನೀರಾವರಿ ಇಲಾಖೆಯಲ್ಲಿ ₹618.85 ಕೋಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ₹21.88 ಕೋಟಿ, ಬಂದರು ಮತ್ತು ಮೀನುಗಾರಿಕೆ ಇಲಾಖೆಯಲ್ಲಿ ₹43.01 ಕೋಟಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಬಿಲ್‌ಗಳು ಬಾಕಿ ಇರುವುದಾಗಿ ಗೋಕುಲದಾಸ್ ಶೆಟ್ಟಿ ವಿವರಿಸಿದರು.

ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಹಾಲಾಡಿ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡಿ, ಬ್ಯಾಂಕ್ ಸಾಲ, ಓವರ್‌ಡ್ರಾಫ್ಟ್ ಹಾಗೂ ಖಾಸಗಿ ಸಾಲದ ಮೂಲಕ ಬಂಡವಾಳ ಹೊಂದಿಸಿ ಕಾಮಗಾರಿಗಳನ್ನು ನಿರ್ವಹಿಸಿದ್ದು, ಕಾರ್ಮಿಕರ ವೇತನ, ಯಂತ್ರೋಪಕರಣಗಳ ಬಾಡಿಗೆ, ಡೀಸೆಲ್, ಸಿಮೆಂಟ್, ಉಕ್ಕು, ಜಿಲ್ಲಿ, ಮರಳು, ಪೈಪ್ ಸೇರಿದಂತೆ ವಿವಿಧ ಸಾಮಗ್ರಿಗಳ ವೆಚ್ಚವನ್ನು ಮುಂಗಡವಾಗಿ ಭರಿಸಿದ್ದಾರೆ. ಜತೆಗೆ ಜಿಎಸ್‌ಟಿ, ರಾಯಲ್ಟಿ, ಕಾರ್ಮಿಕ ಸೆಸ್ ಮತ್ತಿತರ ಶಾಸನಬದ್ಧ ಪಾವತಿಗಳನ್ನೂ ಮಾಡಿದ್ದಾರೆ.
ಬಿಲ್ ಪಾವತಿ ವಿಳಂಬದಿಂದ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಬ್ಯಾಂಕ್ ಬಡ್ಡಿ, ಇಎಂಐ ಪಾವತಿಸುವುದು ಕಷ್ಟವಾಗಿದ್ದು, ಕಾರ್ಮಿಕರು ಹಾಗೂ ಸಾಮಗ್ರಿ ಪೂರೈಕೆದಾರರಿಗೆ ಹಣ ಪಾವತಿಸಲಾಗದೆ ಮುಂದಿನ ಕಾಮಗಾರಿಗಳನ್ನು ಕೈಗೊಳ್ಳಲೂ ತೊಂದರೆಯಾಗಿದೆ. ಬಾಕಿ ಇರುವ ಎಲ್ಲ ಬಿಲ್‌ಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಿ, ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಪಾವತಿಸುವಂತೆ ಮುಖ್ಯಮಂತ್ರಿ ನಿರ್ದೇಶನ ನೀಡಬೇಕು. ಬಹುಕಾಲದಿಂದ ಬಾಕಿ ಇರುವ ಹಾಗೂ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರ ಬಿಲ್‌ಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದರು.

ತಾರತಮ್ಯ ಧೋರಣೆ ಆರೋಪ:

ಬೇರೆ ಜಿಲ್ಲೆಗಳ ಗುತ್ತಿಗೆದಾರರಿಗೆ ಒಂದಷ್ಟು ಬಿಲ್‌ಗಳು ಪಾವತಿಯಾಗುತ್ತಿದ್ದು, ಉಡುಪಿ ಜಿಲ್ಲೆಯ ಗುತ್ತಿಗೆದಾರರಿಗೆ ಮಾತ್ರ ಬಿಲ್ ಪಾವತಿ ಆಗುತ್ತಿಲ್ಲ. ಈ ರೀತಿಯ ತಾರತಮ್ಯ ಧೋರಣೆ ಸರಿಯಲ್ಲ ಎಂದು ಗೋಕುಲದಾಸ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಬಿ.ಬಿ. ಪೂಜಾರಿ, ಉಪಾಧ್ಯಕ್ಷರಾದ ಎ.ಬಿ.ಶೆಟ್ಟಿ, ವಾದಿರಾಜ್ ಶೆಟ್ಟಿ ಹೆಬ್ರಿ, ಹೆಗ್ಗುಂಜೆ ಪ್ರಮೋದ್ ಶೆಟ್ಟಿ, ಖಜಾಂಚಿ ಚೇರ್ಕಾಡಿ ರತ್ನಾಕರ ಶೆಟ್ಟಿ, ಕಾರ್ಯದರ್ಶಿಗಳಾದ ಪವನ್ ಶಿರಿಯಾರ, ರವಿಕಿರಣ್ ಡಿ’ ಕೋಸ್ಟ್, ಉಮೇಶ್ ಶೆಟ್ಟಿ ಮುನಿಯಾಳು, ಸುರೇಶ್ ಶೆಟ್ಟಿ ಕೋಟ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಇದ್ದರು.