


ಡೈಲಿವಾರ್ತೆ:19/ಸೆ./2026

ಕಾಪು: ಸುಭಾಸ್ ನಗರದಲ್ಲಿರುವ ಕೊಬ್ಬರಿ ಘಟಕದಲ್ಲಿ ಆಕಸ್ಮಿಕ ಬೆಂಕಿ:
ಲಕ್ಷಾಂತರ ರೂ. ನಷ್ಟ.!

ಕಾಪು, ಸೆ.19: ತಾಲೂಕಿನ ಸುಭಾಷ್ ನಗರದಲ್ಲಿರುವ ಕೊಬ್ಬರಿ ಘಟಕವೊಂದರಲ್ಲಿ ಶನಿವಾರ ಬೆಳಗ್ಗಿನ ಜಾವ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಘಟಕದಲ್ಲಿ ದಾಸ್ತಾನಿಟ್ಟಿದ್ದ ಅಪಾರ ಪ್ರಮಾಣದ ಕೊಬ್ಬರಿ ಸುಟ್ಟುಹೋದ ಘಟನೆ ನಡೆದಿದೆ.
ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದೆಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಘಟಕದಲ್ಲಿದ್ದ ಕೊಬ್ಬರಿ ದಾಸ್ತಾನಿಗೆ ಕ್ಷಣಾರ್ಧದಲ್ಲೇ ಬೆಂಕಿ ವ್ಯಾಪಿಸಿದ್ದು, ದಟ್ಟ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಲಭಿಸಿದ ಕೂಡಲೇ ಉಡುಪಿ ಅಗ್ನಿಶಾಮಕ ದಳದ ಎರಡು ವಾಹನಗಳು ಸ್ಥಳಕ್ಕೆ ಧಾವಿಸಿವೆ. ಅಗ್ನಿಶಾಮಕ ಸಿಬ್ಬಂದಿ ತುರ್ತು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ಘಟಕದ ಸುತ್ತಮುತ್ತಲಿನ ಪ್ರದೇಶಗಳಿಗೆ ಬೆಂಕಿ ವ್ಯಾಪಿಸುವುದನ್ನು ತಡೆದಿದ್ದಾರೆ.
ಹಲವು ವರ್ಷಗಳಿಂದ ಈ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ನಳಿನಿ ಪುಷ್ಪಲತಾ ಸಾಲಿಯನ್ಸ್ ಅವರ ಮಾಲಕತ್ವದ ಕೊಬ್ಬರಿ ಘಟಕ ಇದಾಗಿದೆ. ಘಟಕದಲ್ಲಿ ದಾಸ್ತಾನಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕೊಬ್ಬರಿ ಬೆಂಕಿಗೆ ಆಹುತಿಯಾಗಿದೆ.
ಆರಂಭಿಕ ಅಂದಾಜಿನ ಪ್ರಕಾರ ಸುಮಾರು ₹10ರಿಂದ ₹15 ಲಕ್ಷದಷ್ಟು ನಷ್ಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಆದರೆ, ಬೆಂಕಿಯಿಂದ ಉಂಟಾದ ನಷ್ಟದ ನಿಖರ ಪ್ರಮಾಣದ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಅಗ್ನಿಶಾಮಕ ದಳದ ಸಮಯೋಚಿತ ಕಾರ್ಯಾಚರಣೆಯಿಂದ ಬೆಂಕಿ ಮತ್ತಷ್ಟು ವ್ಯಾಪಿಸುವುದನ್ನು ತಡೆಯಲಾಗಿದ್ದು, ಸಂಭವಿಸಬಹುದಾದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.