


ಡೈಲಿವಾರ್ತೆ:19/ಸೆ./2026

ಮೀನು ವ್ಯಾಪಾರ ಬಂದ್ ಮಾಡಿಸಿದ್ದಕ್ಕೆ ಪೊಲೀಸರ ವಿರುದ್ಧ ಸಿಎಂ ಗರಂ: ಮೀನುಗಾರರ ಕಷ್ಟ ಕೇಳಲು ಬಂದಿದ್ದೇನೆ – ವ್ಯಾಪಾರ ಬಂದ್ ಮಾಡೋಕೆ ಯಾರು ಹೇಳಿದ್ದು? – ಡಿಕೆಶಿ ತರಾಟೆ

ಮಂಗಳೂರು, ಸೆ.19: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಗಮನದ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಮೀನು ವ್ಯಾಪಾರವನ್ನು ಪೊಲೀಸರು ಬಂದ್ ಮಾಡಿಸಿದ್ದಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

ಮೀನುಗಾರರ ಸಮಸ್ಯೆಗಳನ್ನು ಆಲಿಸಲು ಹಾಗೂ ಬಂದರಿನಲ್ಲಿನ ಮೀನು ವ್ಯಾಪಾರದ ಪರಿಸ್ಥಿತಿ ವೀಕ್ಷಿಸಲು ಬೆಳ್ಳಂಬೆಳಗ್ಗೆ ಬಂದರಿಗೆ ಆಗಮಿಸಿದ ಮುಖ್ಯಮಂತ್ರಿ, ಎಂದಿನಂತೆ ವ್ಯಾಪಾರ ಚಟುವಟಿಕೆಗಳು ನಡೆಯದೆ ಇರುವುದನ್ನು ಗಮನಿಸಿದರು. ಈ ವೇಳೆ ಮೀನು ವ್ಯಾಪಾರಿಗಳು, ತಮ್ಮ ವ್ಯಾಪಾರವನ್ನು ಪೊಲೀಸರು ಬಂದ್ ಮಾಡಿಸಿರುವುದರಿಂದ ತೊಂದರೆಯಾಗಿದೆ ಎಂದು ಮುಖ್ಯಮಂತ್ರಿಗೆ ದೂರು ನೀಡಿದರು.

ಇದರಿಂದ ಸಿಟ್ಟಾದ ಡಿ.ಕೆ. ಶಿವಕುಮಾರ್, ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳ ಬಳಿ ಮೀನುಗಾರರ ಕಷ್ಟ ಕೇಳಲು ನಾನು ಬಂದಿದ್ದೇನೆ. ಅವರ ವ್ಯಾಪಾರ ಬಂದ್ ಮಾಡಲು ಹೇಳಿದ್ದು ಯಾರು? ವ್ಯಾಪಾರ ಬಂದ್ ಮಾಡಿಸಲು ನಿಮಗೆ ಯಾರು ಅಧಿಕಾರ ಕೊಟ್ಟರು? ಎಂದು ಪ್ರಶ್ನಿಸಿದರು.

ತಮ್ಮ ಭದ್ರತೆಯ ನೆಪದಲ್ಲಿ ಮೀನುಗಾರರಿಗೆ ತೊಂದರೆ ನೀಡುವುದನ್ನು ತೀವ್ರವಾಗಿ ಆಕ್ಷೇಪಿಸಿದ ಅವರು ನಿಮ್ಮ ಸೆಕ್ಯುರಿಟಿ ಯಾರಿಗೆ ಬೇಕು? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬಳಿಕ ಮೀನು ವ್ಯಾಪಾರ ಬಂದ್ ಮಾಡಿಸುವಂತೆ ಆದೇಶ ನೀಡಿದವರು ಯಾರು ಎಂಬುದನ್ನು ಪರಿಶೀಲಿಸುವಂತೆ ಜಿಲ್ಲಾಧಿಕಾರಿ ದರ್ಶನ್ ಅವರಿಗೆ ಸೂಚಿಸಿದರು.
ಯಾರಾದರೂ ಅಧಿಕಾರಿಗಳು ಅಥವಾ ಸಿಬ್ಬಂದಿ ವ್ಯಾಪಾರ ಬಂದ್ ಮಾಡುವಂತೆ ಆದೇಶ ನೀಡಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಮುಖ್ಯಮಂತ್ರಿ, ಯಾರಾದರೂ ಆರ್ಡರ್ ಮಾಡಿದ್ದರೆ ಅವರನ್ನು ಸಸ್ಪೆಂಡ್ ಮಾಡಿ ಎಂದು ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಈ ವೇಳೆ ಸಮಜಾಯಿಷಿ ನೀಡಲು ಮುಂದಾದ ಮಂಗಳೂರು ಡಿಸಿಪಿಗೂ ಮುಖ್ಯಮಂತ್ರಿ ತರಾಟೆ ತೆಗೆದುಕೊಂಡರು. ಇಂದು ಮೀನುಗಾರರ ಸಮಸ್ಯೆ ಆಲಿಸಲು ಹಾಗೂ ಅವರ ವ್ಯಾಪಾರ ವೀಕ್ಷಿಸಲು ಬಂದಿದ್ದೇನೆ. ಆದರೆ ವ್ಯಾಪಾರವನ್ನೇ ಬಂದ್ ಮಾಡಿಸಿ ಅವರಿಗೆ ತೊಂದರೆ ಕೊಟ್ಟಿದ್ದೀರಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಆಗಮನದ ಹಿನ್ನೆಲೆಯಲ್ಲಿ ಮೀನುಗಾರಿಕಾ ದಕ್ಕೆಯಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿತ್ತು. ಭದ್ರತಾ ವ್ಯವಸ್ಥೆಯ ಭಾಗವಾಗಿ ಮೀನು ವ್ಯಾಪಾರ ಸ್ಥಗಿತಗೊಳಿಸಲಾಗಿತ್ತು ಎನ್ನಲಾಗಿದೆ. ಇದರಿಂದ ಸಾಮಾನ್ಯವಾಗಿ ಕಂಡುಬರುವ ಮೀನು ವ್ಯಾಪಾರದ ಚಟುವಟಿಕೆ ಹಾಗೂ ಜನಜಂಗುಳಿ ಶುಕ್ರವಾರ ಕಾಣಿಸದ ಹಿನ್ನೆಲೆಯಲ್ಲಿ ವ್ಯಾಪಾರಿಗಳಿಗೆ ತೊಂದರೆಯಾಗಿತ್ತು.
ಮುಖ್ಯಮಂತ್ರಿಗಳ ಭೇಟಿ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸೇರಿದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.