ಡೈಲಿವಾರ್ತೆ:19/ಸೆ./2026

ತುಂಬೆ ಪ.ಪೂ. ಕಾಲೇಜು ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ., ಕ್ರೀಡೆಯು ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯವನ್ನು ವೃದ್ಧಿಸುತ್ತದೆ : ಪ್ರೇಮನಾಥ್ ಶೆಟ್ಟಿ ಬಿ.ಎ

ಬಂಟ್ವಾಳ : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕರ ಕಚೇರಿ, ದಕ್ಷಿಣ ಕನ್ನಡ ಹಾಗೂ ತುಂಬೆ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಬಾಲಕ–ಬಾಲಕಿಯರ ಕರಾಟೆ ಸ್ಪರ್ಧೆಯು ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕ್ರೀಡಾ ಸಂಯೋಜಕ ಪ್ರೇಮನಾಥ್ ಶೆಟ್ಟಿ ಬಿ.ಎ. ಮಾತನಾಡಿ, ಕ್ರೀಡೆಯು ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯವನ್ನು ವೃದ್ಧಿಸುವುದರ ಜೊತೆಗೆ ಶಿಸ್ತು, ಆತ್ಮವಿಶ್ವಾಸ, ಸಮಯಪ್ರಜ್ಞೆ ಹಾಗೂ ಸವಾಲುಗಳನ್ನು ಎದುರಿಸುವ ಮನೋಭಾವವನ್ನು ಬೆಳೆಸುತ್ತದೆ. ಕರಾಟೆಯಂತಹ ಸಮರ ಕಲೆಗಳು ವಿದ್ಯಾರ್ಥಿ ಗಳಲ್ಲಿ ಆತ್ಮರಕ್ಷಣೆ, ಏಕಾಗ್ರತೆ ಹಾಗೂ ಮಾನಸಿಕ ದೃಢತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದಿನೇಶ್ ಶೆಟ್ಟಿ ಅಳಿಕೆ ಮಾತನಾಡಿ, ಕ್ರೀಡೆಯು ಶಿಕ್ಷಣದ ಅವಿಭಾಜ್ಯ ಅಂಗವಾಗಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡಾ ಚಟುವಟಿಕೆಗಳು ಅಗತ್ಯ ಎಂದರು.

ತುಂಬೆ ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ (ರಿ) ಅಧ್ಯಕ್ಷ ಬಿ. ಅಬ್ದುಲ್ ಸಲಾಂ, ದಕ್ಷಿಣ ಕನ್ನಡ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ರಾಹುಲ್ ತೋನ್ಸೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನಿಸಾರ್ ಅಹಮದ್ ವಳವೂರು,
ಶುಭಹಾರೈಸಿದರು.

ತುಂಬೆ ಪದವಿ ಪೂರ್ವ ಕಾಲೇಜಿನ ಕಛೇರಿ ಅಧೀಕ್ಷಕ ಅಬ್ದುಲ್ ಕಬೀರ್, ಕಾಲೇಜಿನ ನಿವೃತ್ತ ಪ್ರಾಂಶುಪಾಲ ಗಂಗಾಧರ ಆಳ್ವ, ಕರ್ನಾಟಕ ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಮೊಹಮ್ಮದ್ ನದೀಮ್, ಉದ್ಯಮಿ ಮೊಹಮ್ಮದ್ ಹನೀಫ್ ಬೋಳಿಯಾರು, ರಕ್ಷಕ ಶಿಕ್ಷಕ ಸಂಘದ ಕ್ರೀಡಾ ಕಾರ್ಯದರ್ಶಿ ಅಬ್ದುಲ್ ಗಪೂರ್ ಹಸನ್, ತುಂಬೆ ಪ್ರೌಢಶಾಲೆಯ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಮೋಹಿನಿ ಸುವರ್ಣ, ಸದಸ್ಯರಾದ ಚಂಚಲಾಕ್ಷಿ, ಮ್ಯಾಕ್ಸಿಮ್ ಕುವೆಲ್ಲೊ ಹಾಗೂ ಶರೀಫ್ ವಿಯೆಟ್ನಾಂ, ತುಂಬೆ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ವಿದ್ಯಾ, ಆಂಗ್ಲ ಮಾಧ್ಯಮದ ಮುಖ್ಯೋಪಾಧ್ಯಾಯಿನಿ ಸೌಮ್ಯ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕಿ ಮೋಲಿ ಎಡ್ನಾ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಂ ಜೆ. ನಾಯಕ್ ಸ್ವಾಗತಿಸಿ, ಪ್ರೌಢಶಾಲೆಯ ದೈಹಿಕ ಶಿಕ್ಷಣ ನಿರ್ದೇಶಕ ಜಗದೀಶ್ ರೈ ವಂದಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಕವಿತಾ ಎಂ. ಕಾರ್ಯಕ್ರಮ ನಿರೂಪಿಸಿದರು.