


ಡೈಲಿವಾರ್ತೆ:19/ಸೆ./2026

ತೀರ್ಥಹಳ್ಳಿ: ಕಸ್ತೂರಿ ರಂಗನ್ ಸಂವಾದಕ್ಕೆ ವೇದಿಕೆಯಲ್ಲಿ ‘ವಂದೇ ಮಾತರಂ’ ಎರಡೇ ಚರಣಕ್ಕೆ ಕತ್ತರಿ – ಸಿಎಂ ಎದುರೇ ಬಿಜೆಪಿ ಶಾಸಕನ ಆಕ್ಷೇಪ, ವೇದಿಕೆಯಲ್ಲೇ ಬಿಜೆಪಿ, ಕಾಂಗ್ರೆಸ್ ಶಾಸಕರ ನಡುವೆ ಸಂಘರ್ಷ!

ಶಿವಮೊಗ್ಗ, ಸೆ.19: ಕಸ್ತೂರಿ ರಂಗನ್ ವರದಿ ಕುರಿತು ಸಾರ್ವಜನಿಕರ ಅಭಿಪ್ರಾಯ ಆಲಿಸಲು ತೀರ್ಥಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇರ ಸಂವಾದ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯನ್ನು ಅರ್ಧಕ್ಕೆ ಹಾಡಿದ ವಿಚಾರವೇ ಕೆಲಕಾಲ ಗೊಂದಲಕ್ಕೆ ಕಾರಣವಾಯಿತು.
ತೀರ್ಥಹಳ್ಳಿಯ ಯು.ಆರ್. ಅನಂತಮೂರ್ತಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆದ ಸಂವಾದ ಹಾಗೂ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಲಾಗಿದ್ದು, ಇದಕ್ಕೆ ಬಿಜೆಪಿ ಶಾಸಕ ಎಸ್.ಎನ್. ಚನ್ನಬಸಪ್ಪ ವೇದಿಕೆಯಲ್ಲೇ ಆಕ್ಷೇಪ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ರಾಜ್ಯದಲ್ಲಿ ಹಲವು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಆದರೆ ವಂದೇ ಮಾತರಂ ಗೀತೆಯನ್ನು ಕೇವಲ ಎರಡು ಚರಣಗಳಿಗೆ ಸೀಮಿತಗೊಳಿಸಿರುವುದು ಜನರ ಭಾವನೆಗೆ ಧಕ್ಕೆ ಉಂಟುಮಾಡಿದೆ ಎಂದು ಚನ್ನಬಸಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರ ಈ ಹೇಳಿಕೆಗೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ವೇದಿಕೆಯಲ್ಲೇ ತೀವ್ರವಾಗಿ ಪ್ರತಿಕ್ರಿಯಿಸಿದರು. ಇಬ್ಬರು ಶಾಸಕರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಂತೆ ವೇದಿಕೆಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಈ ವೇಳೆ ವೇದಿಕೆಯಲ್ಲಿದ್ದ ಕಾಂಗ್ರೆಸ್ ಮುಖಂಡರು ಚನ್ನಬಸಪ್ಪ ಅವರ ಸುತ್ತ ಸೇರಿ, ಅವರ ಭಾಷಣವನ್ನು ಮುಂದುವರಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿತು. ಮೈದಾನದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರೂ ಚನ್ನಬಸಪ್ಪ ಅವರ ಆಕ್ಷೇಪಕ್ಕೆ ವಿರೋಧ ವ್ಯಕ್ತಪಡಿಸಿದರು.
ಕಾರ್ಯಕರ್ತರು ‘ಡಿಕೆ, ಡಿಕೆ’ ಎಂದು ಘೋಷಣೆ ಕೂಗುತ್ತಿದ್ದ ಹಿನ್ನೆಲೆಯಲ್ಲಿ ಕೆಲಕಾಲ ಕಾರ್ಯಕ್ರಮದ ವಾತಾವರಣ ಗದ್ದಲಮಯವಾಯಿತು. ನಂತರ ಪರಿಸ್ಥಿತಿಯನ್ನು ನಿಯಂತ್ರಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕಸ್ತೂರಿ ರಂಗನ್ ವರದಿ ಕುರಿತ ಸಾರ್ವಜನಿಕರ ಸಂವಾದ ಮುಂದುವರಿಸಲಾಯಿತು.
.