ಡೈಲಿವಾರ್ತೆ:22/ಸೆ./2026

ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಹತ್ಯೆ! ಕಾರಿನಲ್ಲಿ ಶವ ಪತ್ತೆ: ಪತ್ನಿ, ಅಪ್ರಾಪ್ತ ಪುತ್ರ ನಾಪತ್ತೆ, ತೀವ್ರಗೊಂಡ ತನಿಖೆ

ಉಡುಪಿ: ಉಡುಪಿ ಮೂಲದ ವ್ಯಕ್ತಿಯೊಬ್ಬರನ್ನು ಶಾರ್ಜಾದಲ್ಲಿ ಅಮಾನವೀಯವಾಗಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉಡುಪಿ ಮೂಲದ ಪ್ರಕಾಶ್ ಕುಂದರ್ ಹತ್ಯೆಗೀಡಾದ ವ್ಯಕ್ತಿಯಾಗಿದ್ದು, ಕಳೆದ ಜುಲೈ ತಿಂಗಳಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

ಪ್ರಕಾಶ್ ಅವರು ಪತ್ನಿ ಟೀನಾ ಹಾಗೂ ಅಪ್ರಾಪ್ತ ಪುತ್ರನೊಂದಿಗೆ ಶಾರ್ಜಾದಲ್ಲಿ ವಾಸವಾಗಿದ್ದರು. ಶಾರ್ಜಾ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಅವರು, ಜುಲೈ 20ರ ಸುಮಾರಿಗೆ ಸಹೋದರ ಪ್ರಶಾಂತ್ ಕುಂದರ್ ಅವರನ್ನು ಸಂಪರ್ಕಿಸಲು ಯತ್ನಿಸಿದ್ದರು ಎನ್ನಲಾಗಿದೆ. ಸಾಮಾನ್ಯವಾಗಿ ವಾಯ್ಸ್ ಮೆಸೇಜ್ ಮೂಲಕ ಪ್ರತಿಕ್ರಿಯಿಸುತ್ತಿದ್ದ ಪ್ರಕಾಶ್, ಅಂದು ಟೆಕ್ಸ್ಟ್ ಮೆಸೇಜ್ ಮೂಲಕ ಮಾತ್ರ ಪ್ರತಿಕ್ರಿಯಿಸಿದ್ದರು. ಬಳಿಕ ಕರೆ ಮಾಡುವಂತೆ ಸಹೋದರ ಒತ್ತಾಯಿಸಿದಾಗ ಸಂಪರ್ಕ ಕಡಿತಗೊಂಡಿತ್ತು ಎನ್ನಲಾಗಿದೆ.
ಇದರಿಂದ ಆತಂಕಗೊಂಡ ಕುಟುಂಬಸ್ಥರು ಹಾಗೂ ಸಂಬಂಧಿಕರು ಪ್ರಕಾಶ್ ಅವರ ಬಗ್ಗೆ ವಿಚಾರಿಸಿದಾಗ, ಅವರು ಭಾರತಕ್ಕೆ ತೆರಳಿರುವುದಾಗಿ ಅವರು ಕೆಲಸ ಮಾಡುತ್ತಿದ್ದ ಕಂಪನಿಯಿಂದ ಮಾಹಿತಿ ದೊರೆತಿತ್ತು. ಆದರೆ ಪ್ರಕಾಶ್ ಭಾರತಕ್ಕೆ ಬಂದಿರುವ ಯಾವುದೇ ಮಾಹಿತಿ ಕುಟುಂಬಕ್ಕೆ ಲಭ್ಯವಾಗಿರಲಿಲ್ಲ. ಹೀಗಾಗಿ ಶಾರ್ಜಾದಲ್ಲಿ ಪ್ರಕರಣ ದಾಖಲಿಸಿ, ಪೊಲೀಸರು ಅವರಿಗಾಗಿ ಹುಡುಕಾಟ ಆರಂಭಿಸಿದ್ದರು.

ತನಿಖೆ ಮುಂದುವರಿದ ವೇಳೆ ಪ್ರಕಾಶ್ ಅವರದೇ ಕಾರಿನಲ್ಲಿ ಶವ ಪತ್ತೆಯಾಗಿದ್ದು, ದೇಹದ ಮೇಲೆ ಇರಿತದ ಗಾಯಗಳಿದ್ದವು ಎಂದು ತಿಳಿದುಬಂದಿದೆ. ಅಲ್ಲದೆ, ಮೃತದೇಹವನ್ನು ಹಲವು ತುಂಡುಗಳಾಗಿ ಮಾಡಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಘಟನೆಯು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಶಾರ್ಜಾ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಇದರ ನಡುವೆ ಪ್ರಕಾಶ್ ಅವರ ಪತ್ನಿ ಟೀನಾ ಹಾಗೂ ಅಪ್ರಾಪ್ತ ಪುತ್ರ ನಾಪತ್ತೆಯಾಗಿರುವುದು ಪ್ರಕರಣದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಆದರೆ ಅವರ ನಾಪತ್ತೆ ಹಾಗೂ ಹತ್ಯೆಯ ನಡುವೆ ಯಾವುದೇ ನೇರ ಸಂಬಂಧವಿದೆಯೇ ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ. ಪ್ರಕರಣದ ನಿಖರ ಕಾರಣ, ಹತ್ಯೆಯ ಹಿಂದಿನ ಉದ್ದೇಶ ಹಾಗೂ ಆರೋಪಿಗಳ ಕುರಿತು ಶಾರ್ಜಾ ಪೊಲೀಸರ ತನಿಖೆಯ ಬಳಿಕವಷ್ಟೇ ಸ್ಪಷ್ಟ ಮಾಹಿತಿ ಹೊರಬರಬೇಕಿದೆ.
ಪ್ರಕಾಶ್ ಹಾಗೂ ಟೀನಾ ಸುಮಾರು 20 ವರ್ಷಗಳ ಹಿಂದೆ ವಿವಾಹವಾಗಿದ್ದರು ಎನ್ನಲಾಗಿದೆ. ಟೀನಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಅವರ ಪುತ್ರ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಕಾಶ್ ಭಾರತಕ್ಕೆ ಆಗಮಿಸಿದ್ದರು ಎನ್ನಲಾಗಿದೆ.
ಕುಟುಂಬದಲ್ಲಿ ಯಾವುದೇ ಕಲಹವಿರುವ ಬಗ್ಗೆ ಸಂಬಂಧಿಕರಿಗೆ ಮಾಹಿತಿ ಇರಲಿಲ್ಲ ಎಂದು ತಿಳಿದುಬಂದಿದೆ.

ಸದ್ಯ ಪ್ರಕಾಶ್ ಅವರ ಮೃತದೇಹವನ್ನು ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಭಾರತಕ್ಕೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಕುಟುಂಬಸ್ಥರು ಮೃತದೇಹದ ಆಗಮನಕ್ಕಾಗಿ ಕಾಯುತ್ತಿದ್ದಾರೆ.