ಡೈಲಿವಾರ್ತೆ:22/ಸೆ./2026

ಹೆಬ್ರಿ: ಬೇಳಂಜೆಯಲ್ಲಿ ಕಪ್ಪು ಚಿರತೆ ಸಂಚಾರ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ!

ಉಡುಪಿ: ಹೆಬ್ರಿ ತಾಲೂಕಿನ ಕೂಚ್ಚುರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಳಂಜೆ ದೊಡ್ಡಮನೆ ಪ್ರದೇಶದಲ್ಲಿ ಕಪ್ಪು ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಬೇಳಂಜೆ ದೊಡ್ಡಮನೆ ನಿವಾಸಿ ಗಣೇಶ್‌ ಶೆಟ್ಟಿ ಅವರ ಮನೆಯ ಹಟ್ಟಿಯ ಹಿಂಭಾಗದಲ್ಲಿ ಕಪ್ಪು ಚಿರತೆ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಘಟನೆ ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಜನವಸತಿ ಪ್ರದೇಶದ ಸಮೀಪದಲ್ಲೇ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಸಂಚರಿಸುವವರು ಹಾಗೂ ಜಾನುವಾರು ಸಾಕಣೆ ಮಾಡುತ್ತಿರುವವರು ಆತಂಕಕ್ಕೊಳಗಾಗಿದ್ದಾರೆ.

ಈ ಪ್ರದೇಶದಲ್ಲಿ ಚಿರತೆಯ ಚಲನವಲನದ ಬಗ್ಗೆ ಸ್ಥಳೀಯರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದ್ದು, ಯಾವುದೇ ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.
ಘಟನೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಚಿರತೆಯ ಇರುವಿಕೆಯನ್ನು ಪರಿಶೀಲಿಸಿ, ಅದರ ಚಲನವಲನ ಪತ್ತೆಹಚ್ಚಲು ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಜನವಸತಿ ಪ್ರದೇಶಕ್ಕೆ ಚಿರತೆ ನುಗ್ಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡು, ಸಾಧ್ಯವಾದಷ್ಟು ಬೇಗ ಅದನ್ನು ಸೆರೆಹಿಡಿಯಬೇಕು ಎಂದು ಸ್ಥಳೀಯ ಮುಖಂಡ ಅಮೃತ್‌ ಕುಮಾರ್ ಶೆಟ್ಟಿ ಒತ್ತಾಯಿಸಿದ್ದಾರೆ.