


ಡೈಲಿವಾರ್ತೆ:23/ಸೆ./2026

ಶಾರ್ಜಾದಲ್ಲಿ ಕುಂದಾಪುರ ಮೂಲದ ವ್ಯಕ್ತಿಯ ಬರ್ಬರ ಹತ್ಯೆ: ಪತ್ನಿ, ಅಪ್ರಾಪ್ತ ಪುತ್ರ ನಾಪತ್ತೆ!
ಜುಲೈನಲ್ಲಿ ನಡೆದ ಕೃತ್ಯ ಎರಡು ತಿಂಗಳ ಬಳಿಕ ಬಯಲು – ನಿಗೂಢ ಪ್ರಕರಣಕ್ಕೆ ತನಿಖೆ ಚುರುಕು

ಕುಂದಾಪುರ: ಕುಂದಾಪುರ ನಗರದ ಪಾರಿಜಾತ ಸಮೀಪದ ಹೊನ್ನನಕೇರಿ ನಿವಾಸಿಯಾಗಿದ್ದ ಆಲ್ವಿನ್ ಪ್ರಕಾಶ್ ಕುಂದರ್ (50) ಅವರು ಯುಎಇಯ ಶಾರ್ಜಾದಲ್ಲಿ ಬರ್ಬರವಾಗಿ ಹತ್ಯೆಗೀಡಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರಕಾಶ್ ಅವರ ಶವವನ್ನು ಒಂಬತ್ತು ತುಂಡುಗಳಾಗಿ ಕತ್ತರಿಸಿ, ಅವರದ್ದೇ ಕಾರಿನ ಡಿಕ್ಕಿಯಲ್ಲಿ ಇರಿಸಲಾಗಿತ್ತು ಎನ್ನಲಾಗಿದ್ದು, ಘಟನೆಯ ಬಳಿಕ ಅವರ ಪತ್ನಿ ಟೀನಾ ಹಾಗೂ ಅಪ್ರಾಪ್ತ ವಯಸ್ಸಿನ ಪುತ್ರ ನಾಪತ್ತೆಯಾಗಿರುವುದು ಪ್ರಕರಣಕ್ಕೆ ಮತ್ತಷ್ಟು ನಿಗೂಢತೆ ತಂದಿದೆ. ಶಾರ್ಜಾ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
ಪ್ರಕಾಶ್ ಕುಂದರ್ ಅವರು ಕಳೆದ ಸುಮಾರು 14 ವರ್ಷಗಳಿಂದ ಶಾರ್ಜಾದ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಖಾಸಗಿ ಸಂಸ್ಥೆಯಲ್ಲಿ ಟರ್ಮಿನಲ್-2 ವಿಭಾಗದ ಸೀನಿಯರ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಉದ್ಯಾವರ ಮೂಲದ ಟೀನಾ ಅವರನ್ನು ಸುಮಾರು 20 ವರ್ಷಗಳ ಹಿಂದೆ ವಿವಾಹವಾಗಿದ್ದ ಅವರು, ಪತ್ನಿ ಹಾಗೂ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪುತ್ರನೊಂದಿಗೆ ಶಾರ್ಜಾದಲ್ಲಿ ನೆಲೆಸಿದ್ದರು. ಟೀನಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಒಂದು ಸಂದೇಶದಿಂದ ಆರಂಭವಾದ ಅನುಮಾನ:

ಪ್ರಕಾಶ್ ಅವರು ತಮ್ಮ ಹಿರಿಯ ಸಹೋದರ ಅನಿಲ್ ಪ್ರಶಾಂತ್ ಕುಂದರ್ ಅವರೊಂದಿಗೆ ಸಾಮಾನ್ಯವಾಗಿ ಕರೆ ಅಥವಾ ವಾಟ್ಸ್‌ಆ್ಯಪ್ ವಾಯ್ಸ್ ಮೆಸೇಜ್ ಮೂಲಕ ಸಂಪರ್ಕದಲ್ಲಿರುತ್ತಿದ್ದರು. ಆದರೆ ಜು.20ರ ಬಳಿಕ ಅವರ ವರ್ತನೆಯಲ್ಲಿ ಅಸಹಜ ಬದಲಾವಣೆ ಕಂಡುಬಂದಿತ್ತು.
ಸಹೋದರರು ಸಂಪರ್ಕಿಸಲು ಯತ್ನಿಸಿದಾಗ ಎಂದಿನಂತೆ ವಾಯ್ಸ್ ಮೆಸೇಜ್ ಕಳುಹಿಸುವ ಬದಲು, ‘ನಾನು ಹುಷಾರಿದ್ದೇನೆ’ ಎಂಬರ್ಥದ ಕೇವಲ ಟೆಕ್ಸ್ಟ್ ಸಂದೇಶವೊಂದು ಪ್ರಕಾಶ್ ಅವರ ಮೊಬೈಲ್‌ನಿಂದ ಬಂದಿತ್ತು. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಮತ್ತೆ ಮತ್ತೆ ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ. ಸುಮಾರು ಒಂದು ವಾರದ ಬಳಿಕವೂ ಪ್ರಕಾಶ್ ಅವರಿಂದ ಸಹಜ ರೀತಿಯ ಸಂವಹನ ನಡೆಯದ ಹಿನ್ನೆಲೆಯಲ್ಲಿ ಸಹೋದರರು ಆತಂಕಗೊಂಡಿದ್ದರು. ಈ ವೇಳೆ ಸಂಪರ್ಕಿಸಲು ಮಾಡಿದ ಪ್ರಯತ್ನಗಳಿಗೂ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಅನುಮಾನ ಮತ್ತಷ್ಟು ಗಾಢವಾಯಿತು.
ಭಾರತಕ್ಕೆ ತೆರಳಿದ್ದಾರೆ’ ಎಂದಿದ್ದ ಕಂಪೆನಿ:
ಪ್ರಕಾಶ್ ಅವರ ಬಗ್ಗೆ ಮಾಹಿತಿ ಪಡೆಯಲು ಕುಟುಂಬಸ್ಥರು ಶಾರ್ಜಾದಲ್ಲಿದ್ದ ಅವರ ಪರಿಚಿತರ ಮೂಲಕ ಅವರು ವಾಸವಾಗಿದ್ದ ಸ್ಥಳ ಹಾಗೂ ಕೆಲಸ ಮಾಡುತ್ತಿದ್ದ ಸಂಸ್ಥೆಯನ್ನು ಸಂಪರ್ಕಿಸಿದ್ದರು. ಪ್ರಕಾಶ್ ಭಾರತಕ್ಕೆ ತೆರಳಿದ್ದಾರೆ ಎಂದು ಸಂಸ್ಥೆಯ ವತಿಯಿಂದ ಮಾಹಿತಿ ನೀಡಲಾಗಿತ್ತು ಎನ್ನಲಾಗಿದೆ. ಆದರೆ ಅವರು ಸ್ವದೇಶಕ್ಕೆ ಬಂದಿರುವ ಬಗ್ಗೆ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ಇರಲಿಲ್ಲ.
ಬಳಿಕ ಅವರ ಪಾಸ್‌ಪೋರ್ಟ್ ಹಾಗೂ ಇತರ ಮಾಹಿತಿಗಳನ್ನು ಪರಿಶೀಲಿಸಿದಾಗ ಅವರು ಶಾರ್ಜಾದಲ್ಲೇ ಇರುವ ಸಾಧ್ಯತೆ ಬೆಳಕಿಗೆ ಬಂದಿದ್ದು, ಕುಟುಂಬಸ್ಥರು ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು ಎನ್ನಲಾಗಿದೆ. ಬಳಿಕ ಶಾರ್ಜಾ ಪೊಲೀಸರು ತನಿಖೆ ಕೈಗೊಂಡಿದ್ದರು.
ಕಾರಿನ ಡಿಕ್ಕಿಯಲ್ಲಿ 9 ತುಂಡುಗಳಾಗಿ ಶವ ಪತ್ತೆ:

ತನಿಖೆ ಮುಂದುವರಿದ ಸಂದರ್ಭದಲ್ಲಿ ಪ್ರಕಾಶ್ ಅವರದ್ದೇ ಕಾರಿನಲ್ಲಿ ಮಾನವ ಅವಶೇಷಗಳು ಪತ್ತೆಯಾಗಿದ್ದವು. ಶವವನ್ನು ಒಂಬತ್ತು ತುಂಡುಗಳಾಗಿ ಕತ್ತರಿಸಿ ಎರಡು ಚೀಲಗಳಲ್ಲಿ ಇರಿಸಲಾಗಿತ್ತು ಎನ್ನಲಾಗಿದೆ. ಬಳಿಕ ಡಿಎನ್‌ಎ ಸೇರಿದಂತೆ ವಿಧಿವಿಜ್ಞಾನ ಪರೀಕ್ಷೆಗಳ ಮೂಲಕ ಪತ್ತೆಯಾದ ಅವಶೇಷಗಳು ಪ್ರಕಾಶ್ ಕುಂದರ್ ಅವರದ್ದೇ ಎಂಬುದು ದೃಢಪಟ್ಟಿದೆ ಎಂದು ಕುಟುಂಬಸ್ಥರಿಗೆ ತಿಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷಾ ವರದಿಯೂ ಕುಟುಂಬಸ್ಥರಿಗೆ ಲಭ್ಯವಾಗಿದೆ ಎನ್ನಲಾಗಿದೆ. ಕೊಲೆ ಯಾವ ಸಂದರ್ಭದಲ್ಲಿ, ಯಾರಿಂದ ಮತ್ತು ಯಾವ ಕಾರಣಕ್ಕಾಗಿ ನಡೆದಿದೆ ಎಂಬುದರ ಬಗ್ಗೆ ಶಾರ್ಜಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪತ್ನಿ, ಪುತ್ರನ ಪತ್ತೆಗೆ ಮುಂದುವರಿದ ಶೋಧ:
ಪ್ರಕಾಶ್ ಅವರ ಹತ್ಯೆಯ ಬಳಿಕ ಪತ್ನಿ ಟೀನಾ ಹಾಗೂ ಅಪ್ರಾಪ್ತ ಪುತ್ರ ಶಾರ್ಜಾದಲ್ಲಿ ನಾಪತ್ತೆಯಾಗಿರುವುದು ಪ್ರಕರಣದ ಪ್ರಮುಖ ಅಂಶವಾಗಿದೆ. ಅವರು ಭಾರತಕ್ಕೆ ಬಂದಿರಬಹುದು ಎಂಬ ಯಾವುದೇ ಮಾಹಿತಿ ಕುಟುಂಬಸ್ಥರಿಗೆ ಲಭ್ಯವಾಗಿಲ್ಲ ಎನ್ನಲಾಗಿದೆ.
ಈ ಕೊಲೆಯ ಹಿಂದೆ ಪತ್ನಿಯ ಪಾತ್ರವಿದೆಯೇ ಅಥವಾ ಇತರರ ಸಹಾಯದಿಂದ ಕೃತ್ಯ ನಡೆದಿದೆಯೇ ಎಂಬುದೂ ಸೇರಿದಂತೆ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಕೆಲವು ವರದಿಗಳಲ್ಲಿ ಟೀನಾ ಅವರ ವೈಯಕ್ತಿಕ ಸಂಬಂಧಗಳ ಕುರಿತು ಆರೋಪಗಳು ಕೇಳಿಬಂದಿದ್ದರೂ, ಅವುಗಳಿಗೆ ಈವರೆಗೆ ಅಧಿಕೃತ ಪೊಲೀಸ್ ದೃಢೀಕರಣ ಲಭ್ಯವಾಗಿಲ್ಲ.
ಸಹೋದರರಿಂದ ಸಮಗ್ರ ತನಿಖೆಗೆ ಮನವಿ:
ಪ್ರಕಾಶ್ ಅವರ ಸಹೋದರ ಅನಿಲ್ ಪ್ರಶಾಂತ್ ಕುಂದರ್ ಅವರು ಪ್ರಕರಣದ ಕುರಿತು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿ, ತಮ್ಮ ಸಹೋದರನ ಸಾವಿನ ಹಿಂದಿರುವ ಸಂಪೂರ್ಣ ಸತ್ಯವನ್ನು ಹೊರತರುವಂತೆ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಪ್ರಕಾಶ್ ಅವರ ಪಾರ್ಥಿವ ಶರೀರವನ್ನು ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಭಾರತಕ್ಕೆ ತರಲು ಕುಟುಂಬಸ್ಥರು ಎದುರು ನೋಡುತ್ತಿದ್ದಾರೆ.