ಡೈಲಿವಾರ್ತೆ:23/ಸೆ./2026

ರೌಡಿ ಶೀಟರ್‌ಗಳ ಜೊತೆ ಎಎಸ್‌ಐ ‘ಎಣ್ಣೆ ಪಾರ್ಟಿ’! ಗ್ರಾಮಸ್ಥರ ಆಕ್ರೋಶಕ್ಕೆ ಪೊಲೀಸ್ ಅಧಿಕಾರಿಗೆ ಅಮಾನತು

ಚಿಕ್ಕಮಗಳೂರು: ರೌಡಿ ಶೀಟರ್‌ಗಳ ಜೊತೆ ಬಾರ್‌ನಲ್ಲಿ ಪಾರ್ಟಿ ಆಯೋಜಿಸಿ, ಇಡೀ ರಾತ್ರಿ ಜೋರಾಗಿ ಹಾಡು ಹಾಕಿದ್ದ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್‌ ಎಎಸ್‌ಐ ಒಬ್ಬರನ್ನು ಅಮಾನತುಗೊಳಿಸಲಾಗಿದೆ.

ಕಡೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣೆಯ ಎಎಸ್‌ಐ ವೀರೇಂದ್ರ ಅಮಾನತುಗೊಂಡವರು.

ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯ್ಮಾ ಅವರು ಎಎಸ್‌ಐ ವೀರೇಂದ್ರ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕಡೂರು ತಾಲೂಕಿನ ಎಮ್ಮೆದೊಡ್ಡಿ ಮುಸ್ಲಾಪುರ ಗ್ರಾಮದಲ್ಲಿ ಸುಮಾರು ಒಂದು ವಾರದ ಹಿಂದೆ ಈ ಘಟನೆ ನಡೆದಿತ್ತು ಎನ್ನಲಾಗಿದೆ. ಬಾರ್‌ನಲ್ಲಿ ರೌಡಿ ಶೀಟರ್‌ಗಳೊಂದಿಗೆ ಎಎಸ್‌ಐ ವೀರೇಂದ್ರ ಪಾರ್ಟಿ ನಡೆಸಿದ್ದರು ಎಂಬ ಆರೋಪ ಕೇಳಿಬಂದಿದ್ದು, ಈ ವೇಳೆ ಇಡೀ ರಾತ್ರಿ ಜೋರಾಗಿ ಹಾಡು ಹಾಕಲಾಗಿತ್ತು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಬಾರ್‌ ಮುಂಭಾಗ ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ್ದರು. ಮಹಿಳೆಯರು ಸೇರಿದಂತೆ ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಾರ್‌ ಬಂದ್ ಮಾಡುವಂತೆ ಆಗ್ರಹಿಸಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ನಿರಂತರವಾಗಿ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದ್ದು, ಕರ್ತವ್ಯದಲ್ಲಿರುವ ಅಧಿಕಾರಿಯೊಬ್ಬರು ರೌಡಿ ಶೀಟರ್‌ಗಳೊಂದಿಗೆ ಪಾರ್ಟಿ ನಡೆಸಿದ ಆರೋಪ ಗಂಭೀರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಎಎಸ್‌ಐ ವೀರೇಂದ್ರ ಅವರನ್ನು ಅಮಾನತುಗೊಳಿಸಲಾಗಿದೆ.