ಡೈಲಿವಾರ್ತೆ:23/ಸೆ./2026

ಸಾಲಿಗ್ರಾಮ ಪಟ್ಟಣ ಪಂಚಾಯತ್‌ಗೆ ಖಾಯಂ ಮುಖ್ಯಾಧಿಕಾರಿ ನೇಮಕಕ್ಕೆ ಜಿಲ್ಲಾಧಿಕಾರಿಗೆ ಮನವಿ: ಪ್ರಭಾರ ಆಡಳಿತಕ್ಕೆ ಬೇಸತ್ತ ಸಾಲಿಗ್ರಾಮ ಜನತೆ – ಬೇಡಿಕೆ ಈಡೇರದಿದ್ದರೆ ಅನಿರ್ದಿಷ್ಟಾವಧಿ ಧರಣಿ ಎಚ್ಚರಿಕೆ!

ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ಕಳೆದ ಎರಡು ವರ್ಷಗಳಿಂದ ಖಾಯಂ ಮುಖ್ಯಾಧಿಕಾರಿ ಇಲ್ಲದ ಹಿನ್ನೆಲೆಯಲ್ಲಿ ತಕ್ಷಣವೇ ಖಾಯಂ ಮುಖ್ಯಾಧಿಕಾರಿಯನ್ನು ನೇಮಕಗೊಳಿಸುವಂತೆ ಆಗ್ರಹಿಸಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ನಾಗರಿಕರು ಬುಧವಾರ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರಸ್ತುತ ಬೈಂದೂರು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಅವರು ಪ್ರಭಾರ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ವಾರದಲ್ಲಿ ಎರಡು ದಿನ ಮಾತ್ರ ಕಚೇರಿಗೆ ಆಗಮಿಸುವುದರಿಂದ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ ಹಾಗೂ ಅಭಿವೃದ್ಧಿ ಕಾಮಗಾರಿಗಳೂ ಕುಂಠಿತಗೊಂಡಿವೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಅಲ್ಲದೆ, ಕಚೇರಿಗೆ ಬರುವ ನಾಗರಿಕರೊಂದಿಗೆ ಉಡಾಫೆಯ ವರ್ತನೆ ತೋರುತ್ತಿದ್ದಾರೆ ಎಂಬ ದೂರನ್ನೂ ನಾಗರಿಕರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಹಲವು ಬಾರಿ ಮೇಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಖಾಯಂ ಮುಖ್ಯಾಧಿಕಾರಿಯನ್ನು ನೇಮಕ ಮಾಡಬೇಕು ಹಾಗೂ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿರುವ ಅಧಿಕಾರಿಯನ್ನು ಎತ್ತಂಗಡಿ ಮಾಡಬೇಕು ಎಂದು ಮನವಿ ಮಾಡಲಾಗಿದೆ. ಬೇಡಿಕೆ ಈಡೇರದಿದ್ದಲ್ಲಿ ಸೆಪ್ಟೆಂಬರ್ 25ರಿಂದ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿ ಎದುರು ಸಾರ್ವಜನಿಕರು, ಮಹಿಳೆಯರು ಹಾಗೂ ಮೀನುಗಾರ ಮಹಿಳೆಯರ ಬೆಂಬಲದೊಂದಿಗೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ಮನವಿ ಸಲ್ಲಿಸುವ ವೇಳೆ ಸಾಮಾಜಿಕ ಹೋರಾಟಗಾರ ನಾಗರಾಜ್ ಗಾಣಿಗ, ಕೋಟ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮೇಶ್ ಮೆಂಡನ್ ಹಾಗೂ ಹಲವರು ಉಪಸ್ಥಿತರಿದ್ದರು.