


ಡೈಲಿವಾರ್ತೆ:23/ಸೆ./2026

ಮಂಗಳೂರು: ಹಿಂಸಾತ್ಮಕವಾಗಿ 17 ಜಾನುವಾರುಗಳ ಸಾಗಾಟ – ಕಂಕನಾಡಿ ನಗರ ಪೊಲೀಸರಿಂದ ಲಾರಿ ಚಾಲಕ ಬಂಧನ, ಗೋವುಗಳ ರಕ್ಷಣೆ!

ಮಂಗಳೂರು: ಜಾನುವಾರುಗಳನ್ನು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಹಿಂಸಾತ್ಮಕ ರೀತಿಯಲ್ಲಿ ಲಾರಿಯಲ್ಲಿ ತುಂಬಿಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಕಂಕನಾಡಿ ನಗರ ಪೊಲೀಸರು ಲಾರಿ ಚಾಲಕನನ್ನು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕಂಕನಾಡಿ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಬೆಳಗಿನ ಜಾವ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಜಾನುವಾರುಗಳನ್ನು ಈಚರ್ ಲಾರಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಬೆಳಗ್ಗೆ ಸುಮಾರು 6.30ರ ವೇಳೆಗೆ ಆಡ್ಯಾರು ಕಡೆಯಿಂದ ಮಂಗಳೂರು ನಗರದತ್ತ ಬರುತ್ತಿದ್ದ ಈಚರ್ ಲಾರಿಯನ್ನು ಪೊಲೀಸರು ಬೆನ್ನಟ್ಟಿ, ಪಡೀಲ್‌ನ ಟೊಯೋಟಾ ಕಾರ್ ಶೋರೂಮ್ ಎದುರು ತಡೆದಿದ್ದಾರೆ.
ಈ ವೇಳೆ ಲಾರಿಯಲ್ಲಿದ್ದ ಓರ್ವ ವ್ಯಕ್ತಿ ಲಾರಿಯಿಂದ ಇಳಿದು ಪರಾರಿಯಾಗಿದ್ದಾನೆ. ಬಳಿಕ ಲಾರಿಯನ್ನು ಪರಿಶೀಲಿಸಿದ ಪೊಲೀಸರು ಒಟ್ಟು 17 ಜಾನುವಾರುಗಳನ್ನು ಪತ್ತೆಹಚ್ಚಿದ್ದಾರೆ.
ಜಾನುವಾರುಗಳನ್ನು ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೆ, ಒಂದರ ಮೇಲೊಂದರಂತೆ ಬಿಗಿಯಾಗಿ ಕಟ್ಟಿ, ಹಗ್ಗಗಳಿಂದ ಲಾರಿಯ ಬಾಡಿಗೆ ಬಂಧಿಸಲಾಗಿತ್ತು. ಕತ್ತುಗಳನ್ನು ಮೇಲಕ್ಕೆತ್ತಿ, ಉಸಿರಾಟಕ್ಕೂ ತೊಂದರೆಯಾಗುವ ರೀತಿಯಲ್ಲಿ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಸಾದಿಕ್ ಎಂಬಾತನನ್ನು ಬಂಧಿಸಲಾಗಿದ್ದು, 17 ಜಾನುವಾರುಗಳು ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದಲ್ಲಿ ಪರಾರಿಯಾಗಿರುವ ಆರೋಪಿಗಳಾದ ಸುಬಾನ್ ಹಾಗೂ ರೆಹಮಾನ್ ಅವರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಗಳೂರು ನಗರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.