


ಡೈಲಿವಾರ್ತೆ:23/ಸೆ./2026

ಬಂಟ್ವಾಳ : ಸೆ. 26 ರಂದು ನೂತನ ಮನೆಯ ಹಸ್ತಾಂತರ ಸಮಾರಂಭ

ಬಂಟ್ವಾಳ : ಸರಪಾಡಿ ಮಾವಿನಕಟ್ಟೆಯ ಕಡು ಬಡತನದಲ್ಲಿರುವ ಶ್ರೀಮತಿ ಭವಾನಿ ಶೆಟ್ಟಿಯವರಿಗೆ ಬೋಳಂತೂರು ಗುತ್ತು ಸಂಜೀವ ಶೆಟ್ಟಿ ಬಿ.ಸಿ.ರೋಡು ಇವರ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ನೂತನವಾಗಿ ನಿರ್ಮಾಣಗೊಂಡ ಮನೆಯ ಹಸ್ತಾಂತರ ಸಮಾರಂಭವು ಸ. 26 ರಂದು ಸರಪಾಡಿ ಬಾಚಕೆರೆ ದೇವಸ್ಥಾನದ ಬಳಿ ನಡೆಯಲಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ತಿಳಿಸಿದರು.
ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಬಿ.ರಮಾನಾಥ ರೈ, ಮುಂಬಯಿ ಉದ್ಯಮಿ ರಘು ಎಲ್.ಶೆಟ್ಟಿ, ಲಯನ್ ಕುಡ್ಪಿ ಅರವಿಂದ ಶೆಣೈ, ಲಯನ್ ಡಾ|ಗೀತಾ ಪ್ರಕಾಶ್, ಲಯನ್ ಗೋವರ್ಧನ ಶೆಟ್ಟಿ, ಸೀತಾರಾಮ ರೈ ಸವಣೂರು, ಲಯನ್ ರಿಯಾಝ್ ರೆಕ್ಸಿಡಿ, ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ದೇಜಪ್ಪ, ಬೆಂಗಳೂರು ಉದ್ಯಮಿ ವಿಶ್ವನಾಥ ಶೆಟ್ಟಿ ಮೊದಲಾದವರು ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.
ಬೋಳಂತೂರು ಗುತ್ತು ಲಯನ್ ಸಂಜೀವ ಶೆಟ್ಟಿ ಮಾತನಾಡಿ, ಈ ಹಿಂದೆ ಬಂಟ್ವಾಳ ಲಯನ್ಸ್ ಕ್ಲಬ್ ಮನೆ ಕಟ್ಟಿ ಕೊಡುವ ಭರವಸೆ ನೀಡಿದೆಯಾದರೂ ಯಾವುದೇ ರೀತಿಯ ಸ್ಪಂದನೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕೆಲವೊಂದು ದಾನಿಗಳನ್ನು ಸಂಪರ್ಕಿಸಿದ್ದು ಮಂಗಳೂರು ಕರಾವಳಿ ಕ್ಲಬ್ ನ ರಿಯಾಝ್ ರೆಕ್ಸಿಡಿ ಅವರು ಯಾವುದೇ ರೀತಿಯ ಜಾತಿ ಧರ್ಮದ ಭೇದವಿಲ್ಲದೆ ಮಾನವೀಯತೆಯ ನೆಲೆಯಲ್ಲಿ ಉತ್ತಮ ಸಹಕಾರ ನೀಡಿದ್ದಾರೆ ಎಂದರು.
ರಿಯಾಝ್ ರೆಕ್ಸಿಡಿ ಮಾತನಾಡಿ, ದೇವರ ಸೃಷ್ಟಿಯಲ್ಲಿ ಯಾವುದೇ ಭೇದ ಭಾವ ಇಲ್ಲದಿರುವಾಗ ನಾವು ಮಾನವೀಯತೆಯಿಂದ ಅನ್ಯೋನ್ಯತೆಯಿಂದ ಬಾಳಿ ಬದುಕಬೇಕಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಲಯನ್ ಪ್ರಕಾಶ್ ಆಳ್ವ ಉಪಸ್ಥಿತರಿದ್ದರು