ಡೈಲಿವಾರ್ತೆ:27/ಸೆ./2026

ಕನ್ನಡದ ಶಿವಮಣಿ ಖ್ಯಾತಿಯ ಡ್ರಮ್ಮರ್ ದೇವ ನಿಧನ

ಬೆಂಗಳೂರು, ಸೆ.27: ‘ಕನ್ನಡದ ಶಿವಮಣಿ’ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ಡ್ರಮ್ಮರ್ ದೇವ (64) ಅವರು ತೀವ್ರ ಅನಾರೋಗ್ಯದಿಂದ ಭಾನುವಾರ ನಿಧನರಾದರು.
ಕಳೆದ ಮೂರೂವರೆ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದೇವ ಅವರು ಇತ್ತೀಚೆಗೆ ಗ್ಯಾಂಗ್ರಿನ್ ಸಮಸ್ಯೆಯಿಂದಾಗಿ ಒಂದು ಕಾಲನ್ನು ಕಳೆದುಕೊಂಡಿದ್ದರು. ಆದರೂ ಧೃತಿಗೆಡದೆ ಕೃತಕ ಕಾಲಿನ ನೆರವಿನಿಂದಲೂ ಡ್ರಮ್ಸ್ ನುಡಿಸುವುದನ್ನು ಮುಂದುವರಿಸಿದ್ದರು.
ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇತ್ತೀಚೆಗೆ ಮನೆಗೆ ಮರಳಿದ್ದರು. ಆದರೆ, ಕಳೆದ ಎರಡು ದಿನಗಳಿಂದ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿದ್ದು, ಭಾನುವಾರ ಕೊನೆಯುಸಿರೆಳೆದರು.

300ಕ್ಕೂ ಅಧಿಕ ಹಾಡುಗಳಿಗೆ ಡ್ರಮ್ಸ್
ಕನ್ನಡ ಚಿತ್ರರಂಗದ ವರನಟ ಡಾ. ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವು ಪ್ರಮುಖ ನಟರ 300ಕ್ಕೂ ಅಧಿಕ ಸಿನಿಮಾಗೀತೆಗಳಿಗೆ ದೇವ ಅವರು ಡ್ರಮ್ಸ್ ನುಡಿಸಿದ್ದರು. ಸಾಧುಕೋಕಿಲ, ಗುರುಕಿರಣ್ ಸೇರಿದಂತೆ ಕನ್ನಡದ ಹಲವು ಸಂಗೀತ ನಿರ್ದೇಶಕರೊಂದಿಗೆ ಅವರು ಕೆಲಸ ಮಾಡಿದ್ದರು. ‘5 ಈಡಿಯಟ್ಸ್’ ಹಾಗೂ ‘ಪ್ರೀತಿ ನೀ ಹಿಂಗ್ಯಾಕೆ’ ಸಿನಿಮಾಗಳಿಗೆ ಸಂಗೀತ ನಿರ್ದೇಶಕರಾಗಿಯೂ ದೇವ ಅವರು ಕಾರ್ಯನಿರ್ವಹಿಸಿದ್ದರು.

ಕೊನೆಯ ಕ್ಷಣದವರೆಗೂ ಡ್ರಮ್ಸ್ ಮೇಲೆಯೇ ಒಲವು:
ತಂದೆಯ ನಿಧನದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರ ಪುತ್ರಿ ರಿಶೋನಾ, ‘‘ಡ್ರಮ್ಸ್ ಎಂದರೆ ತಂದೆಗೆ ಎಲ್ಲಿಲ್ಲದ ಪ್ರೀತಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲೂ ಬೆಡ್ ಮೇಲೆಯೇ ಡ್ರಮ್ಸ್ ನುಡಿಸುತ್ತಿದ್ದರು. ಕೈಗೆ ಸ್ಟಿಕ್ಸ್ ಕೊಡಿ ಎಂದು ಕೇಳುತ್ತಿದ್ದರು. ಕಳೆದ ಎರಡು ದಿನಗಳಿಂದ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು, ಇಂದು ನಮ್ಮನ್ನು ಅಗಲಿದ್ದಾರೆ’’ ಎಂದು ಕಣ್ಣೀರಿಟ್ಟರು.

ಕ್ರೈಸ್ತ ವಿಧಿವಿಧಾನದಂತೆ ಅಂತ್ಯಕ್ರಿಯೆ:
ಡ್ರಮ್ಮರ್ ದೇವ ಅವರ ಅಂತ್ಯಕ್ರಿಯೆಯನ್ನು ಭಾನುವಾರ ಮಧ್ಯಾಹ್ನ 3 ಗಂಟೆಗೆ ಕ್ರೈಸ್ತ ಧಾರ್ಮಿಕ ವಿಧಿವಿಧಾನದಂತೆ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಅಂತ್ಯಕ್ರಿಯೆ ನಡೆಯುವ ಸ್ಥಳವನ್ನು ಕುಟುಂಬದವರು ಅಂತಿಮಗೊಳಿಸಲಿದ್ದಾರೆ.