


ಡೈಲಿವಾರ್ತೆ:02/ಅ./2026

ಬೆಂಗಳೂರು – ಮಡಗಾಂವ್ ನಡುವೆ ವಂದೇ ಭಾರತ್ ಸಂಪರ್ಕ ವಿಸ್ತರಣೆ

ನವದೆಹಲಿ, ಅ.2: ಮಡಗಾಂವ್, ಮಂಗಳೂರು ನಡುವೆ ಪ್ರಸ್ತುತ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಹಾಸನ, ಉಡುಪಿ ಹಾಗೂ ಕಾರವಾರ ಮಾರ್ಗವಾಗಿ ಬೆಂಗಳೂರಿನ ಯಶವಂತಪುರದವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿರುವ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆ ಹಾಗೂ ಪ್ರವಾಸೋದ್ಯಮ, ಧಾರ್ಮಿಕ ಯಾತ್ರೆ, ಶಿಕ್ಷಣ ಮತ್ತು ವಾಣಿಜ್ಯ ಚಟುವಟಿಕೆಗಳ ದೃಷ್ಟಿಯಿಂದ ಬೆಂಗಳೂರು–ಕರಾವಳಿ ಕರ್ನಾಟಕ–ಗೋವಾ ನಡುವಿನ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಹಾಸನ, ಮಂಗಳೂರು, ಉಡುಪಿ ಹಾಗೂ ಕಾರವಾರ ಮಾರ್ಗವಾಗಿ ಬೆಂಗಳೂರು ಮತ್ತು ಮಡಗಾಂವ್‌ಗಳನ್ನು ಸಂಪರ್ಕಿಸುವಂತೆ ತಾವು ಮನವಿ ಮಾಡಿದ್ದಾಗಿ ಅವರು ತಿಳಿಸಿದ್ದಾರೆ.
ಮನವಿಗೆ ಕೇಂದ್ರ ರೈಲ್ವೆ ಸಚಿವರು ತ್ವರಿತವಾಗಿ ಹಾಗೂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಇದೀಗ ಮಡಗಾಂವ್–ಮಂಗಳೂರು ವಂದೇ ಭಾರತ್ ಸೇವೆಯನ್ನು ಬೆಂಗಳೂರಿನವರೆಗೆ ವಿಸ್ತರಿಸಲಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಪರಿಷ್ಕೃತ ವೇಳಾಪಟ್ಟಿಯಂತೆ ಈ ರೈಲು 26655/26656 ಯಶವಂತಪುರ–ಮಂಗಳೂರು–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ಹೆಸರಿನಲ್ಲಿ ಸಂಚರಿಸಲಿದೆ. ಇದರೊಂದಿಗೆ ಹಾಸನ, ಕರಾವಳಿ ಕರ್ನಾಟಕ ಹಾಗೂ ಗೋವಾ ಭಾಗಗಳಿಗೆ ಬೆಂಗಳೂರಿನಿಂದ ವೇಗದ ರೈಲು ಸಂಪರ್ಕ ಮತ್ತಷ್ಟು ವಿಸ್ತಾರಗೊಂಡಂತಾಗಿದೆ.
ಬೆಂಗಳೂರು, ಹಾಸನ, ಮಂಗಳೂರು, ಉಡುಪಿ, ಕಾರವಾರ ಹಾಗೂ ಮಡಗಾಂವ್ ನಡುವಿನ ಸಂಪರ್ಕವನ್ನು ಸುಗಮಗೊಳಿಸುವ ಈ ವಿಸ್ತರಣೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವುದರ ಜತೆಗೆ ಕರಾವಳಿ ಪ್ರವಾಸೋದ್ಯಮ, ಪ್ರಾದೇಶಿಕ ಆರ್ಥಿಕ ಚಟುವಟಿಕೆಗಳು ಮತ್ತು ಅಂತರ್‌ರಾಜ್ಯ ಸಂಚಾರಕ್ಕೆ ಉತ್ತೇಜನ ನೀಡುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು, ಕರಾವಳಿ ಕರ್ನಾಟಕ ಹಾಗೂ ಗೋವಾ ನಡುವಿನ ರೈಲು ಸಂಪರ್ಕವನ್ನು ಆಧುನೀಕರಿಸುವ ನಿಟ್ಟಿನಲ್ಲಿ ಈ ವಿಸ್ತರಣೆಯನ್ನು ಮತ್ತೊಂದು ಮಹತ್ವದ ಹೆಜ್ಜೆ ಎಂದು ಕುಮಾರಸ್ವಾಮಿ ಬಣ್ಣಿಸಿದ್ದಾರೆ.