


ಡೈಲಿವಾರ್ತೆ:01/ಅ./2026

ಫಾರ್ಮ್-7 ದುರ್ಬಳಕೆ ಆರೋಪ: ಚುನಾವಣಾಧಿಕಾರಿ ಕಚೇರಿ ಮೆಟ್ಟಿಲಲ್ಲೇ ಸಿಎಂ ಧರಣಿ

ಬೆಂಗಳೂರು, ಅ.1: SIR ಪ್ರಕ್ರಿಯೆಯಲ್ಲಿ ಫಾರ್ಮ್-7 ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟದ ಸದಸ್ಯರು ಗುರುವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ರಾಜ್ಯದಲ್ಲಿ ಈಗಾಗಲೇ 1.07 ಕೋಟಿ ಮತದಾರರ ಹೆಸರುಗಳನ್ನು ಕೈಬಿಡಲಾಗಿದ್ದು, 45 ಲಕ್ಷ ಮಂದಿಗೆ ನೋಟಿಸ್ ನೀಡಲಾಗಿದೆ. ಇದರ ಬೆನ್ನಲ್ಲೇ ಸುಮಾರು 50 ಲಕ್ಷ ಮತದಾರರ ಹೆಸರುಗಳನ್ನು ಅಳಿಸಲು ಬಿಜೆಪಿ ಕಾರ್ಯಕರ್ತರು ಫಾರ್ಮ್-7 ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ಈ ಸಂಬಂಧ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರಿಗೆ ದಾಖಲೆಗಳ ಸಮೇತ ದೂರು ಸಲ್ಲಿಸಿದ ನಿಯೋಗ, ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು. ದೂರುಗಳನ್ನು ಪರಿಶೀಲಿಸಲು ಹಾಗೂ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯಲು ಸಮಯ ಅಗತ್ಯವಿದೆ ಎಂದು ಚುನಾವಣಾಧಿಕಾರಿ ತಿಳಿಸಿದರು.
ಬಳ್ಳಾರಿ, ವಿಜಯಪುರ, ಬೆಳಗಾವಿ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಫಾರ್ಮ್-7ರ ಮುದ್ರಿತ ನಮೂನೆಗಳನ್ನು ದುರ್ಬಳಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಆರೋಪಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿರುವುದಾಗಿಯೂ ಹೇಳಿದರು.
ಚುನಾವಣಾಧಿಕಾರಿಗಳಿಂದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವವರೆಗೆ ಧರಣಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. ಬಳಿಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ದೂರುಗಳ ಕುರಿತು ಮಾಹಿತಿ ಪಡೆದುಕೊಂಡರು.