


ಡೈಲಿವಾರ್ತೆ:04/ಅ./2026

ಕಾರವಾರದಲ್ಲಿ ಯುವಕರ ಅಟ್ಟಹಾಸ:
ನಡುರಸ್ತೆಯಲ್ಲೇ ರಾಡ್-ಇಟ್ಟಿಗೆಗಳಿಂದ ಮಾರಾಮಾರಿ!

ಕಾರವಾರ: ನಗರದ ಮ್ಯಾಕ್ಸ್ ಬಳಿಯ ಹೊರ ಆವರಣದ ರಸ್ತೆಯಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಯುವಕರ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ನಡುರಸ್ತೆಯಲ್ಲೇ ರಾಡ್ ಹಾಗೂ ಸಿಮೆಂಟ್ ಇಟ್ಟಿಗೆಗಳನ್ನು ಹಿಡಿದುಕೊಂಡು ಪರಸ್ಪರ ಹೊಡೆದಾಡಿಕೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ.
ರೈಲ್ವೆ ನಿಲ್ದಾಣದತ್ತ ತೆರಳುವ ರಸ್ತೆಯಲ್ಲೇ ಯುವಕರು ಪರಸ್ಪರ ಹಲ್ಲೆ ನಡೆಸಿದ್ದರಿಂದ ಕೆಲಕಾಲ ಸ್ಥಳದಲ್ಲಿ ಆತಂಕ ಹಾಗೂ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಾರವಾರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಬಳಿಕ ಗಲಾಟೆಯಲ್ಲಿ ಭಾಗಿಯಾಗಿದ್ದ ಕೆಲ ಯುವಕರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ಯುವಕರು ಕಾರವಾರ ನಗರದ ಕೋಣೆನಾಲ ಹಾಗೂ ಕೆಇಬಿ ಕಾಲೋನಿ ಪ್ರದೇಶದವರು ಎನ್ನಲಾಗಿದ್ದು, ಗಲಾಟೆಗೆ ನಿಖರ ಕಾರಣ ಹಾಗೂ ಘಟನೆಯ ಸಂಪೂರ್ಣ ವಿವರ ಪೊಲೀಸ್ ತನಿಖೆಯ ಬಳಿಕ ತಿಳಿದುಬರಬೇಕಿದೆ.