ಡೈಲಿವಾರ್ತೆ:03/ಅ./2026

ಕದ್ದ ಚಿನ್ನದ ಸರ ನುಂಗಿದ ಕಳ್ಳ; 50ಕ್ಕೂ ಅಧಿಕ ಬಾಳೆಹಣ್ಣು ತಿನ್ನಿಸಿ ಆಭರಣ ವಶಕ್ಕೆ!

ಮುಂಬೈ, ಅ.3: ಮಹಿಳೆಯೊಬ್ಬರಿಂದ ಕಳವು ಮಾಡಿದ್ದ ಚಿನ್ನದ ಸರವನ್ನು ಪೊಲೀಸರಿಂದ ತಪ್ಪಿಸಿಕೊಳ್ಳಲು ನುಂಗಿಬಿಟ್ಟಿದ್ದ ಆರೋಪಿಗೆ ಮುಂಬೈ ಪೊಲೀಸರು 50ಕ್ಕೂ ಅಧಿಕ ಬಾಳೆಹಣ್ಣುಗಳನ್ನು ತಿನ್ನಿಸಿ, ಕೊನೆಗೂ ಆಭರಣವನ್ನು ಮಲದ ಮೂಲಕ ಹೊರತೆಗೆದ ಘಟನೆ ನಡೆದಿದೆ.

ಮುಂಬೈ ನಗರದ ಬೀದಿಯಲ್ಲಿ ಮಹಿಳೆಯ ಚಿನ್ನದ ಸರ ಕಸಿದುಕೊಂಡ ಆರೋಪದಡಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದರು. ಬಂಧನದ ವೇಳೆ ಆತನ ಬಳಿಯಿದ್ದ ಚಿನ್ನದ ಸರವನ್ನು ವಶಪಡಿಸಿಕೊಳ್ಳುವ ಮುನ್ನವೇ ಆರೋಪಿ ಅದನ್ನು ನುಂಗಿಬಿಟ್ಟಿದ್ದ. ಬಳಿಕ ವಿಚಾರಣೆ ನಡೆಸಿದರೂ ಸರ ಕಳವು ಮಾಡಿರುವುದನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದ ಎನ್ನಲಾಗಿದೆ.

ಆರೋಪಿಯ ವೈದ್ಯಕೀಯ ತಪಾಸಣೆ ನಡೆಸಿದಾಗ ಎಕ್ಸ್‌ರೇ ಮೂಲಕ ಚಿನ್ನದ ಸರ ಹೊಟ್ಟೆಯಲ್ಲಿರುವುದು ಪತ್ತೆಯಾಯಿತು. ಸರವನ್ನು ಹೊರತೆಗೆಯಲು ಶಸ್ತ್ರಚಿಕಿತ್ಸೆ ನಡೆಸಬೇಕಾಗಬಹುದು ಎಂದು ವೈದ್ಯರು ಸೂಚಿಸಿದ್ದರು.

ಶಸ್ತ್ರಚಿಕಿತ್ಸೆ ಬದಲು ಬಾಳೆಹಣ್ಣುಗಳ ಮೊರೆ:
ಶಸ್ತ್ರಚಿಕಿತ್ಸೆಯ ಅಪಾಯ ಮತ್ತು ವೆಚ್ಚವನ್ನು ಪರಿಗಣಿಸಿದ ಪೊಲೀಸರು, ಆಭರಣವನ್ನು ನೈಸರ್ಗಿಕವಾಗಿ ಹೊರತೆಗೆಯುವ ಪ್ರಯತ್ನ ನಡೆಸಿದರು. ಎನಿಮಾ ಮೂಲಕ ಸರ ಹೊರತೆಗೆಯುವ ಪ್ರಯತ್ನವೂ ಫಲ ನೀಡದ ಹಿನ್ನೆಲೆಯಲ್ಲಿ ಆರೋಪಿಗೆ ಹೆಚ್ಚಿನ ಪ್ರಮಾಣದಲ್ಲಿ ಬಾಳೆಹಣ್ಣುಗಳನ್ನು ತಿನ್ನಿಸುವ ವಿಧಾನ ಅನುಸರಿಸಲಾಯಿತು.
ಮೊದಲ ಹಂತದಲ್ಲಿ ದಿನವೊಂದರಲ್ಲೇ 40ಕ್ಕೂ ಅಧಿಕ ಬಾಳೆಹಣ್ಣುಗಳನ್ನು ತಿನ್ನಿಸಲಾಯಿತು. ಇದಾದ ಬಳಿಕವೂ ಚಿನ್ನದ ಸರ ಹೊರಬರದ ಹಿನ್ನೆಲೆಯಲ್ಲಿ ಮತ್ತಷ್ಟು ಬಾಳೆಹಣ್ಣುಗಳನ್ನು ನೀಡಲಾಯಿತು.
ಕೊನೆಗೂ ಚಿನ್ನದ ಸರ ಆರೋಪಿಯ ಮಲದೊಂದಿಗೆ ಹೊರಬಂದಿದ್ದು, ಪೊಲೀಸರು ಅದನ್ನು ಸ್ವಚ್ಛಗೊಳಿಸಿ ಸೋಂಕು ನಿವಾರಣೆ ಮಾಡಿದ ಬಳಿಕ ಸಂತ್ರಸ್ತ ಮಹಿಳೆಗೆ ಹಿಂತಿರುಗಿಸಿದ್ದಾರೆ ಎಂದು ವರದಿಯಾಗಿದೆ.