ಡೈಲಿವಾರ್ತೆ:04/ಅ./2026

ಟೈರ್ ಬ್ಲಾಸ್ಟ್‌ಗೆ ನಿಯಂತ್ರಣ ತಪ್ಪಿ ಕೋಟೆಕೆರೆಯೊಳಗೆ ಧುಮುಕಿದ ಕಾರು: ಮೂವರು ಪವಾಡಸದೃಶ ಪಾರು!

ಚಿಕ್ಕಮಗಳೂರು: ಟೈರ್ ಬ್ಲಾಸ್ಟ್‌ನಿಂದ ನಿಯಂತ್ರಣ ಕಳೆದುಕೊಂಡ ಕಾರೊಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಕಬ್ಬಿಣದ ತಡೆಬೇಲಿ ಮುರಿದು ಐತಿಹಾಸಿಕ ಕೋಟೆಕೆರೆಗೆ ಧುಮುಕಿದ ಘಟನೆ ನಗರದ ಹೃದಯಭಾಗದಲ್ಲಿ ಆ.4ರ ಭಾನುವಾರ ಸಂಭವಿಸಿದೆ. ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪವಾಡಸದೃಶವಾಗಿ ಪಾರಾಗಿದ್ದಾರೆ.

ಚಿಕ್ಕಮಗಳೂರು ನಗರದ ಕೋಟೆಕೆರೆ ಮಾರ್ಗದಲ್ಲಿ ಕಾರು ಸಂಚರಿಸುತ್ತಿದ್ದ ವೇಳೆ ಏಕಾಏಕಿ ಟೈರ್ ಸ್ಫೋಟಗೊಂಡಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ವಿದ್ಯುತ್ ಕಂಬ ಮುರಿದು ರಸ್ತೆಗೆ ಬಿದ್ದಿದೆ.
ಇಷ್ಟಕ್ಕೇ ನಿಲ್ಲದ ಕಾರು, ಕೋಟೆಕೆರೆಯ ರಕ್ಷಣೆಗೆ ಅಳವಡಿಸಲಾಗಿದ್ದ ಕಬ್ಬಿಣದ ತಡೆಬೇಲಿಯನ್ನು ಮುರಿದುಕೊಂಡು ನೇರವಾಗಿ ಕೆರೆಯೊಳಗೆ ಧುಮುಕಿದೆ. ಕಾರು ನೀರಿನಲ್ಲಿ ಮುಳುಗುತ್ತಿದ್ದಂತೆಯೇ ಅದರಲ್ಲಿದ್ದ ಮೂವರು ಪ್ರಯಾಣಿಕರು ತಕ್ಷಣ ಹೊರಬಂದು ಜೀವ ಉಳಿಸಿಕೊಂಡಿದ್ದಾರೆ.

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಕ್ರೇನ್ ಸಹಾಯದಿಂದ ಕೆರೆಯೊಳಗೆ ಬಿದ್ದಿದ್ದ ಕಾರನ್ನು ಹೊರತೆಗೆದಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.