



ಡೈಲಿವಾರ್ತೆ:04/ಅ./2026

ದಾವಣಗೆರೆ: ಗಣಪತಿ ಮೆರವಣಿಗೆಯಲ್ಲಿ ಅವಘಡ: ಕಮಾನು ಕುಸಿದು ವೃದ್ಧ ಸೇರಿ ಹಲವರಿಗೆ ಗಾಯ!

ದಾವಣಗೆರೆ: ಹಿಂದೂ ಮಹಾಗಣಪತಿ ಶೋಭಾಯಾತ್ರೆ ವೇಳೆ ಎಲ್ಇಡಿ ಕಮಾನು ಕುಸಿದು ಬಿದ್ದ ಪರಿಣಾಮ ವೃದ್ಧ ಸೇರಿದಂತೆ ಹಲವು ಮಂದಿ ಗಾಯಗೊಂಡ ಘಟನೆ ಶನಿವಾರ ಸಂಜೆ ದಾವಣಗೆರೆ ನಗರದ ಪಿಬಿ ರಸ್ತೆಯ ಖಾಸಗಿ ಬಸ್ ನಿಲ್ದಾಣದ ಬಳಿ ನಡೆದಿದೆ.
ನಗರದ ಹೈಸ್ಕೂಲ್ ಮೈದಾನದಿಂದ ಆರಂಭಗೊಂಡ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಎವಿಕೆ ಕಾಲೇಜು ರಸ್ತೆ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಲಾಯರ್ ರಸ್ತೆ ಮೂಲಕ ಪಿಬಿ ರಸ್ತೆಗೆ ಆಗಮಿಸಿತ್ತು. ಈ ವೇಳೆ ಖಾಸಗಿ ಬಸ್ ನಿಲ್ದಾಣದ ಸಮೀಪ ಅಳವಡಿಸಲಾಗಿದ್ದ ಎಲ್ಇಡಿ ಕಮಾನು ಮೇಲೆ ಹತ್ತಾರು ಯುವಕರು ಕುಳಿತಿದ್ದ ಸಂದರ್ಭ ಏಕಾಏಕಿ ಕಮಾನು ಮುರಿದು ನೆಲಕ್ಕುರುಳಿದೆ.
ಕಮಾನು ಕುಸಿಯುತ್ತಿದ್ದಂತೆ ಅದರ ಮೇಲಿದ್ದ ಯುವಕರು ಹಾಗೂ ಕೆಳಗೆ ನಿಂತಿದ್ದ ಕೆಲವರ ಮೇಲೆಯೇ ಬಿದ್ದಿದ್ದು, ಘಟನೆಯ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಕಮಾನು ಕುಸಿದ ರಭಸಕ್ಕೆ ಅದರ ಸಮೀಪದಲ್ಲಿದ್ದ ವೃದ್ಧ ಸಿದ್ದಲಿಂಗಪ್ಪ ಸೇರಿದಂತೆ ಕೆಲ ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪೊಲೀಸರು ಹಾಗೂ ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ.
ಘಟನೆ ಬಳಿಕ ಸ್ಥಳದಲ್ಲಿದ್ದ ಎಲ್ಇಡಿ ಕಮಾನನ್ನು ತೆರವುಗೊಳಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಡಿಜೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಯಿತು. ಗಾಯಾಳುಗಳನ್ನು ತುರ್ತಾಗಿ ಆಸ್ಪತ್ರೆಗೆ ರವಾನಿಸುವಲ್ಲಿ ಪೊಲೀಸರು ಹಾಗೂ ಸ್ಥಳೀಯರು ತೋರಿದ ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನು ಶೋಭಾಯಾತ್ರೆ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಸಾಗಿದ ಬಳಿಕ ಬಾತಿ ಕೆರೆ ಸಮೀಪ ನಿರ್ಮಿಸಲಾಗಿದ್ದ ಕೃತಕ ಬಾವಿಯಲ್ಲಿ ಗಣೇಶ ಮೂರ್ತಿಯನ್ನು ನಿಮಜ್ಜನ ಮಾಡಲಾಯಿತು.
ಶೋಭಾಯಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡು ಗಣಪತಿಗೆ ಭಕ್ತಿ ಸಮರ್ಪಿಸಿದರು. ಯುವಕ-ಯುವತಿಯರು ಡಿಜೆ ಸಂಗೀತಕ್ಕೆ ಕುಣಿದು ಸಂಭ್ರಮಿಸಿದರು.
ಆದರೆ ರಾತ್ರಿ 9 ಗಂಟೆಯ ವೇಳೆಗೆ ಪೊಲೀಸರು ಎಲ್ಲಾ ಡಿಜೆಗಳನ್ನು ಬಂದ್ ಮಾಡಿಸಿದ ಹಿನ್ನೆಲೆಯಲ್ಲಿ ಆಯೋಜಕರು ಹಾಗೂ ಯುವಕರಲ್ಲಿ ಅಸಮಾಧಾನ ಉಂಟಾಯಿತು. ಇದನ್ನು ವಿರೋಧಿಸಿ ಕೆಲ ಯುವಕರು ಪ್ರತಿಭಟನೆ ನಡೆಸಿದ ಘಟನೆ ಕೂಡ ನಡೆದಿದೆ. ಗಣೇಶೋತ್ಸವದ ಸಂಭ್ರಮದ ನಡುವೆಯೇ ನಡೆದ ಕಮಾನು ಕುಸಿತದ ಘಟನೆ ಕೆಲಕಾಲ ಆತಂಕದ ವಾತಾವರಣ ನಿರ್ಮಿಸಿತು.