ಡೈಲಿವಾರ್ತೆ:04/ಅ./2026

ಕಾಂಗ್ರೆಸ್ ಪದಗ್ರಹಣದಲ್ಲೇ ಧ್ವಜ ಯಡವಟ್ಟು:
ಧ್ವಜ ಉಲ್ಟಾ ಹಿಡಿದು ಸೇವಾದಳ ಪಥಸಂಚಲನ!

ಮೈಸೂರು: ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರು ಪಕ್ಷದ ಧ್ವಜವನ್ನು ಉಲ್ಟಾ ಕ್ರಮದಲ್ಲಿ ಹಿಡಿದು ಪಥಸಂಚಲನ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಪಕ್ಷದ ಹಿರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ನಡೆದ ಈ ಯಡವಟ್ಟು ಕೆಲಕಾಲ ಕಾರ್ಯಕ್ರಮದಲ್ಲಿ ಮುಜುಗರದ ವಾತಾವರಣಕ್ಕೆ ಕಾರಣವಾಯಿತು.
ನೂತನ ಜಿಲ್ಲಾಧ್ಯಕ್ಷರಾಗಿ ಬೀರಿಹುಂಡಿ ಬಸವಣ್ಣ ಅವರು ಅಧಿಕಾರ ಸ್ವೀಕರಿಸುವ ಹಿನ್ನೆಲೆಯಲ್ಲಿ ಪದಗ್ರಹಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ನಿರ್ಗಮಿತ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್ ಅವರು ನೂತನ ಜಿಲ್ಲಾಧ್ಯಕ್ಷರಿಗೆ ಕಾಂಗ್ರೆಸ್ ಧ್ವಜ ಹಸ್ತಾಂತರಿಸುವ ಮೂಲಕ ಅಧಿಕೃತವಾಗಿ ಅಧಿಕಾರ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿತ್ತು.

ಆದರೆ, ಕಾರ್ಯಕ್ರಮದ ಸಂದರ್ಭದಲ್ಲಿ ಕಾಂಗ್ರೆಸ್ ಧ್ವಜದ ಬಣ್ಣಗಳ ಜೋಡಣೆಯಲ್ಲೇ ಗಂಭೀರ ಪ್ರಮಾದವಾಗಿರುವುದು ಗಮನಕ್ಕೆ ಬಂದಿದೆ. ಸಾಮಾನ್ಯವಾಗಿ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳ ಕ್ರಮದಲ್ಲಿರಬೇಕಾದ ಧ್ವಜವನ್ನು ಸೇವಾದಳದ ಕಾರ್ಯಕರ್ತರು ಹಸಿರು, ಬಿಳಿ ಹಾಗೂ ಕೇಸರಿ ಬಣ್ಣಗಳ ಕ್ರಮದಲ್ಲಿ ಉಲ್ಟಾ ಅಳವಡಿಸಿದ್ದರು.
ಧ್ವಜದ ಜೋಡಣೆಯಲ್ಲಿನ ತಪ್ಪು ಗಮನಕ್ಕೆ ಬರುತ್ತಿದ್ದಂತೆ ಸೇವಾದಳದ ಕಾರ್ಯಕರ್ತರು ಕೂಡಲೇ ಅದನ್ನು ಸರಿಪಡಿಸಿದರು. ಬಳಿಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಧ್ವಜವನ್ನು ಸರಿಯಾದ ಕ್ರಮದಲ್ಲಿ ಅಳವಡಿಸಿ, ನೂತನ ಜಿಲ್ಲಾಧ್ಯಕ್ಷ ಬೀರಿಹುಂಡಿ ಬಸವಣ್ಣ ಅವರಿಗೆ ಮತ್ತೊಮ್ಮೆ ಧ್ವಜ ಹಸ್ತಾಂತರಿಸುವ ಮೂಲಕ ಅಧಿಕಾರ ಸ್ವೀಕಾರ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು.

ಪಕ್ಷದ ಮಹತ್ವದ ಕಾರ್ಯಕ್ರಮದಲ್ಲೇ ಧ್ವಜದ ವಿಚಾರದಲ್ಲಿ ನಡೆದ ಈ ಪ್ರಮಾದ ಕೆಲಕಾಲ ಗಮನ ಸೆಳೆದಿದ್ದು, ಕಾರ್ಯಕ್ರಮದ ವ್ಯವಸ್ಥೆ ಕುರಿತು ಚರ್ಚೆಗೆ ಕಾರಣವಾಯಿತು.