



ಡೈಲಿವಾರ್ತೆ:05/ಅ./2026

ಶೌಚಾಲಯಕ್ಕೆ ಜಾತಿ ಕೇಳಿದ ಅಧಿಕಾರಿಗಳು: ತುಂಬಿದ ಸಭೆಯಲ್ಲಿ ಶಾಸಕರ ಎದುರೇ ಕಣ್ಣೀರಿಟ್ಟ ಮಹಿಳೆ

ಚಿಕ್ಕಮಗಳೂರು: ಶೌಚಾಲಯ ನಿರ್ಮಿಸಿಕೊಡುವಂತೆ ಹಲವು ವರ್ಷಗಳಿಂದ ಅಧಿಕಾರಿಗಳ ಕಚೇರಿಗೆ ಅಲೆದಾಡುತ್ತಿದ್ದ ಮಹಿಳೆಯೊಬ್ಬರು, ಸಮಸ್ಯೆ ಬಗೆಹರಿಯದೆ ಬೇಸತ್ತು ತುಂಬಿದ ಸಭೆಯಲ್ಲೇ ಕಣ್ಣೀರಿಟ್ಟ ಘಟನೆ ಶೃಂಗೇರಿ ತಾಲೂಕಿನ ಗಂಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಮ್ಮೆ ಗ್ರಾಮದಲ್ಲಿ ನಡೆದಿದೆ.
ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮದಲ್ಲಿ ಶನಿವಾರ ನಡೆದ ಜನಸೇವಾ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಶೌಚಾಲಯದ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದರು. ಈ ವೇಳೆ ಅಧಿಕಾರಿಗಳು ಮಹಿಳೆಯನ್ನು ಅವರ ಸಮುದಾಯದ ಕುರಿತು ಪ್ರಶ್ನಿಸಿದಾಗ, ತಾವು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಹಾಗೂ ಸಾಮಾನ್ಯ ವರ್ಗಕ್ಕೆ (ಜನರಲ್ ಕೆಟಗರಿ) ಸೇರಿರುವುದಾಗಿ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರೆ ಯೋಜನೆಯಡಿ ನೆರವು ಕಲ್ಪಿಸಲು ಅವಕಾಶವಿರುತ್ತಿತ್ತು ಎಂಬರ್ಥದಲ್ಲಿ ಉತ್ತರಿಸಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳ ಈ ಮಾತಿನಿಂದ ಮತ್ತಷ್ಟು ನೊಂದ ಮಹಿಳೆ, ‘ಶೌಚಾಲಯ ನಿರ್ಮಿಸಿಕೊಳ್ಳುವುದಕ್ಕೂ ಜಾತಿ ಮಾನದಂಡವೇ?’ ಎಂದು ಪ್ರಶ್ನಿಸುತ್ತಾ ಸಭೆಯಲ್ಲೇ ಕಣ್ಣೀರಿಟ್ಟಿದ್ದಾರೆ.
ಕಳೆದ ಐದಾರು ವರ್ಷಗಳಿಂದ ಶೌಚಾಲಯ ನಿರ್ಮಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದರೂ ಸಮಸ್ಯೆ ಪರಿಹಾರವಾಗಿರಲಿಲ್ಲ. ಪ್ರತಿಬಾರಿಯೂ ಒಂದೊಂದು ಕಾರಣ ನೀಡಿ ಅಧಿಕಾರಿಗಳು ತಮ್ಮನ್ನು ವಾಪಸ್ ಕಳುಹಿಸುತ್ತಿದ್ದರು ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ಮಹಿಳೆಯ ಅಳಲು ಮತ್ತು ಪರಿಸ್ಥಿತಿಯನ್ನು ಗಮನಿಸಿದ ಶೃಂಗೇರಿ ಶಾಸಕ ರಾಜೇಗೌಡ ಅವರು, ಕೂಡಲೇ ಶೌಚಾಲಯ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶಾಸಕರ ಸೂಚನೆಯ ಹಿನ್ನೆಲೆಯಲ್ಲಿ ಭಾನುವಾರ ತಾಲೂಕು ಮಟ್ಟದ ಅಧಿಕಾರಿಗಳ ತಂಡ ಚಿಮ್ಮೆ ಗ್ರಾಮಕ್ಕೆ ಭೇಟಿ ನೀಡಿ, ಶೌಚಾಲಯ ನಿರ್ಮಾಣಕ್ಕೆ ಎದುರಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಪರಿಶೀಲಿಸಿದೆ.
ಮಹಿಳೆಯ ಕುಟುಂಬದ ಪರಿಸ್ಥಿತಿ ಹಾಗೂ ಸ್ಥಳ ಪರಿಶೀಲನೆ ನಡೆಸಿರುವ ಅಧಿಕಾರಿಗಳು, ಅಗತ್ಯ ಕ್ರಮ ಕೈಗೊಂಡು ಶೀಘ್ರದಲ್ಲೇ ಶೌಚಾಲಯ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ.