ಡೈಲಿವಾರ್ತೆ:05/ಅ./2026

ನಕಲಿ QR ಕೋಡ್‌ ಜಾಲ: ಎಂಐಟಿ ಕ್ಯಾಂಪಸ್‌ನಲ್ಲಿ ₹12 ಲಕ್ಷ ವಂಚನೆ; 6 ಮಂದಿ ಬಂಧನ

ಉಡುಪಿ: ಮಣಿಪಾಲದ ಎಂಐಟಿ ಕ್ಯಾಂಪಸ್‌ನಲ್ಲಿ ಬ್ಯಾಟರಿ ಚಾಲಿತ ವಾಹನಗಳ ಪ್ರಯಾಣಿಕರಿಂದ ಸಂಗ್ರಹಿಸಲಾಗುತ್ತಿದ್ದ ಶುಲ್ಕವನ್ನು ಕಂಪನಿಯ ಖಾತೆಗೆ ಜಮೆ ಮಾಡದೆ, ನಕಲಿ ಮರ್ಚೆಂಟ್ ಕ್ಯೂಆರ್ ಕೋಡ್‌ಗಳ ಮೂಲಕ ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಸುಮಾರು ₹12 ಲಕ್ಷ ವಂಚಿಸಿದ ಆರೋಪದ ಮೇಲೆ ಆರು ಮಂದಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಎಂಐಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಇತರರ ಸಂಚಾರಕ್ಕೆ ಅನುಕೂಲವಾಗುವಂತೆ ‘ಇಂಡಿಯಾಂಟಾ ಇ-ಮೊಬಿಲಿಟಿ’ ಸಂಸ್ಥೆ ಬ್ಯಾಟರಿ ಚಾಲಿತ ವಾಹನಗಳ ಸೇವೆ ನಿರ್ವಹಿಸುತ್ತಿದೆ. ಇದೇ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿದ್ದ ಆರೋಪಿಗಳು, ಕಳೆದ ಏಪ್ರಿಲ್ 1ರಿಂದಲೇ ಹಣದ ಅಕ್ರಮ ವರ್ಗಾವಣೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ.

ಪ್ರಯಾಣಿಕರಿಂದ ಪಡೆಯುತ್ತಿದ್ದ ಪ್ರಯಾಣ ಶುಲ್ಕವನ್ನು ಸಂಸ್ಥೆಯ ಅಧಿಕೃತ ಖಾತೆಗೆ ಪಾವತಿಸುವ ಬದಲು, ಆರೋಪಿಗಳು ಸ್ವತಃ ಸೃಷ್ಟಿಸಿದ್ದ ನಕಲಿ ಮರ್ಚೆಂಟ್ ಕ್ಯೂಆರ್ ಕೋಡ್‌ ಅನ್ನು ಸ್ಕ್ಯಾನ್ ಮಾಡುವಂತೆ ಪ್ರಯಾಣಿಕರಿಗೆ ಸೂಚಿಸುತ್ತಿದ್ದರು. ಹೀಗೆ ನಕಲಿ ಕ್ಯೂಆರ್ ಕೋಡ್‌ ಮೂಲಕ ಸಂಗ್ರಹವಾದ ಹಣವು ಸಂಸ್ಥೆಯ ಖಾತೆಗೆ ಸೇರುವ ಬದಲು ಆರೋಪಿಗಳ ಪೈಕಿ ಮುತ್ತಣ್ಣ ಅಡಿನವರ್ ಅವರ ಪತ್ನಿ ಐಶ್ವರ್ಯ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತಿತ್ತು ಎನ್ನಲಾಗಿದೆ.

ಬಳಿಕ ಖಾತೆಗೆ ಜಮೆಯಾದ ಹಣವನ್ನು ಆರೋಪಿಗಳು ಪರಸ್ಪರ ಹಂಚಿಕೊಳ್ಳುತ್ತಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಸಂಸ್ಥೆಯ ಲೆಕ್ಕಪರಿಶೋಧನೆ ವೇಳೆ ಹಣದ ವ್ಯವಹಾರದಲ್ಲಿ ಅಸಹಜತೆ ಪತ್ತೆಯಾದ ಬಳಿಕ, ಸುಮಾರು ₹12 ಲಕ್ಷದ ವಂಚನೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಮಾನವ ಸಂಪನ್ಮೂಲ ವ್ಯವಸ್ಥಾಪಕರು ಮಣಿಪಾಲ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ತೀವ್ರಗೊಳಿಸಿದ್ದರು. ಮಣಿಪಾಲ ಠಾಣೆಯ ಪಿಎಸ್‌ಐ ಶಂಭುಲಿಂಗಯ್ಯ ಎಂ. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಅಕ್ಟೋಬರ್ 2ರಂದು ಪ್ರಕರಣದ ಎಲ್ಲ ಆರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತರನ್ನು ಸಿದ್ದಮೂರ್ತಿ ಜಿ. (29), ಶಿವರಾಜ್ ನಾಯ್ಕ (30), ಸುದೀಪ್ (30), ಜಿತೇಶ್ ಕಾಂಚನ್ (29), ಮುತ್ತಣ್ಣ ಅಡಿನವರ್ (32) ಹಾಗೂ ಎಂ.ಬಿ. ಅವಿನಾಶ್ (24) ಎಂದು ಗುರುತಿಸಲಾಗಿದೆ.

ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 316, 318 ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ವಂಚನೆ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ಕ್ಯೂಆರ್ ಕೋಡ್‌ ಬಳಸಿ ಹಣವನ್ನು ಬೇರೆ ಖಾತೆಗೆ ತಿರುಗಿಸುತ್ತಿದ್ದ ವಿಧಾನ ಹಾಗೂ ವಂಚನೆಯಿಂದ ಸಂಗ್ರಹಿಸಲಾದ ಹಣದ ಸಂಪೂರ್ಣ ವಹಿವಾಟಿನ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.