ಡೈಲಿವಾರ್ತೆ:05/ಅ./2026

ಸ್ವಚ್ಛತೆಗೆ ಗ್ರಾಮಸ್ಥರ ಸಂಕಲ್ಪ: ರಸ್ತೆಗಿಳಿದು ಕಸ,ಕಳೆ ತೆರವುಗೊಳಿಸಿದ ಮೂಡುತೋಟದ ಯುವಕರು, ಹಿರಿಯರು

ಬ್ರಹ್ಮಾವರ: ಗ್ರಾಮ ಸ್ವಚ್ಛತೆ ಕೇವಲ ಆಡಳಿತದ ಹೊಣೆಗಾರಿಕೆಯಲ್ಲ, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಹೌದು ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ ಬ್ರಹ್ಮಾವರ ತಾಲೂಕಿನ ಕಾವಡಿ ಗ್ರಾಮದ ಮೂಡುತೋಟದಲ್ಲಿ ಗ್ರಾಮಸ್ಥರ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಅಕ್ಟೋಬರ್ 4ರಂದು ನಡೆದ ಸ್ವಚ್ಛತಾ ಅಭಿಯಾನದಲ್ಲಿ ಮೂಡುತೋಟದ ಯುವ ಸದಸ್ಯರು ಹಾಗೂ ಹಿರಿಯ ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡು, ಗ್ರಾಮದ ಸ್ವಚ್ಛತೆ ಹಾಗೂ ಸಾರ್ವಜನಿಕ ಸ್ಥಳಗಳ ನಿರ್ವಹಣೆಗೆ ಕೈಜೋಡಿಸಿದರು.

ಕಾರ್ಯಕ್ರಮದ ಅಂಗವಾಗಿ ರಸ್ತೆಯ ಬದಿಯಲ್ಲಿ ಬೆಳೆದು ರಸ್ತೆ ಸಂಚಾರದ ಅರ್ಧಭಾಗವನ್ನೇ ಆವರಿಸಿದ್ದ ಹುಲ್ಲು, ಕಳೆ ಹಾಗೂ ಪೊದೆಗಳನ್ನು ತೆರವುಗೊಳಿಸಲಾಯಿತು. ರಸ್ತೆಗಳಲ್ಲಿ ಕಂಡುಬಂದಿದ್ದ ಗುಂಡಿಗಳನ್ನು ಮಣ್ಣಿನಿಂದ ಮುಚ್ಚಿ ಸಮತಟ್ಟುಗೊಳಿಸುವ ಮೂಲಕ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಯಿತು.

ಇದರೊಂದಿಗೆ ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಸುತ್ತಮುತ್ತ ಬಿದ್ದಿದ್ದ ಕಸ, ಪ್ಲಾಸ್ಟಿಕ್ ವಸ್ತುಗಳು ಮತ್ತು ಇತರ ತ್ಯಾಜ್ಯಗಳನ್ನು ಸಂಗ್ರಹಿಸಿ ಸ್ಥಳವನ್ನು ಸ್ವಚ್ಛಗೊಳಿಸಲಾಯಿತು. ಯುವಕರು ಮತ್ತು ಹಿರಿಯರು ಯಾವುದೇ ಭೇದವಿಲ್ಲದೆ ಒಗ್ಗಟ್ಟಿನಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ವಿಶೇಷ ಗಮನ ಸೆಳೆಯಿತು.

ಗ್ರಾಮಸ್ಥರ ಸಾಮೂಹಿಕ ಪ್ರಯತ್ನದಿಂದ ಮೂಡುತೋಟದ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶ ಸ್ವಚ್ಛಗೊಂಡಿದ್ದು, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರಿಗೂ ಇದೆ ಎಂಬ ಉತ್ತಮ ಸಂದೇಶವನ್ನು ಈ ಅಭಿಯಾನ ಸಾರಿತು.

ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಯುವ ಸಮುದಾಯ ಹಾಗೂ ಹಿರಿಯರು ಒಂದಾಗಿ ಕೈಜೋಡಿಸಿದ ಈ ಕಾರ್ಯ ಗ್ರಾಮದಲ್ಲಿ ಸ್ವಚ್ಛತೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಕುರಿತು ಜಾಗೃತಿ ಮೂಡಿಸುವಲ್ಲಿ ಮಹತ್ವದ ಹೆಜ್ಜೆಯಾಯಿತು.