



ಡೈಲಿವಾರ್ತೆ:05/ಅ./2026

ಸಿಡಿಲಿನ ಹೊಡೆತಕ್ಕೆ 8 ಕುರಿಗಳು ಬಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಮಾಲೀಕ – ಸರ್ಕಾರದ ಪರಿಹಾರಕ್ಕೆ ಮನವಿ

ಸೊರಬ: ಗುಡುಗು ಸಹಿತ ಸುರಿದ ಭಾರಿ ಮಳೆಯ ವೇಳೆ ಸಿಡಿಲು ಬಡಿದ ಪರಿಣಾಮ ಶೆಡ್‌ನಲ್ಲಿ ಕಟ್ಟಿಹಾಕಲಾಗಿದ್ದ 8 ಕುರಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೊರಬ ತಾಲೂಕಿನ ಉಳವಿ ಹೋಬಳಿಯ ಕಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಾನಹಳ್ಳಿ ಗ್ರಾಮದ ಸುತ್ತಮುತ್ತ ನಿನ್ನೆ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಭಾರಿ ಮಳೆ ಸುರಿದಿತ್ತು. ಇದೇ ವೇಳೆ ಶೆಡ್‌ನಲ್ಲಿ ಕಟ್ಟಿಹಾಕಲಾಗಿದ್ದ ಕುರಿಗಳ ಮೇಲೆ ಸಿಡಿಲು ಬಡಿದಿದ್ದು, ಅದರ ತೀವ್ರತೆಗೆ 8 ಕುರಿಗಳು ಸಾವನ್ನಪ್ಪಿವೆ ಎನ್ನಲಾಗಿದೆ.
ಬೆಳಗ್ಗೆ ಶೆಡ್‌ಗೆ ತೆರಳಿದ ಕುರಿ ಮಾಲೀಕರ ಕುಟುಂಬಸ್ಥರು ಕುರಿಗಳು ಮೃತಪಟ್ಟಿರುವುದನ್ನು ಗಮನಿಸಿ ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಪಶುವೈದ್ಯರು ಮೃತಪಟ್ಟ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ.
ಕುರಿ ಮಾಲೀಕ ಸಿದ್ದಪ್ಪ ಅವರ ಪುತ್ರ ರವಿ ಮಾತನಾಡಿ, ಬೆಳಗ್ಗೆ ಸುಮಾರು 6.30ಕ್ಕೆ ಶೆಡ್‌ಗೆ ತೆರಳಿದಾಗ ಕುರಿಗಳು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಕುರಿಗಳ ಸಾವಿನಿಂದ ಕುಟುಂಬಕ್ಕೆ ಆರ್ಥಿಕವಾಗಿ ತೀವ್ರ ನಷ್ಟ ಉಂಟಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡುವ ಮೂಲಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವಾಗಬೇಕು ಎಂದು ಮನವಿ ಮಾಡಿದ್ದಾರೆ.