ಡೈಲಿವಾರ್ತೆ:05/ಅ./2026

ಮಲ್ಪೆ: ಗೂಡಂಗಡಿಗೆ ನುಗ್ಗಿ ವ್ಯಾಪಾರಿಯ ಒಂದೂವರೆ ಪವನ್ ಚಿನ್ನದ ಸರ ಎಗರಿಸಿದ ದುಷ್ಕರ್ಮಿಗಳು – ದೂರು ದಾಖಲು!

ಉಡುಪಿ: ಗೂಡಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ವೃದ್ಧ ವ್ಯಾಪಾರಿಯೊಬ್ಬರನ್ನು ಏಕಾಏಕಿ ಬಲವಂತವಾಗಿ ಹಿಡಿದು ಬೆದರಿಸಿ, ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಪರಾರಿಯಾದ ಘಟನೆ ಉಡುಪಿ ತಾಲೂಕಿನ ಮಲ್ಪೆ ಕೊಡವೂರು ಗ್ರಾಮದ ಕಡವಿನ ಬಾಗಿಲ ವಿಠೋಭ ರುಖುಮಾಯಿ ಭಜನಾ ಮಂದಿರದ ಬಳಿ ರವಿವಾರ (ಅ.4) ಮಧ್ಯಾಹ್ನ ನಡೆದಿದೆ.

ಕಡವಿನ ಬಾಗಿಲ ನಿವಾಸಿ ಹಾಗೂ ಕಳೆದ ಸುಮಾರು 50 ವರ್ಷಗಳಿಂದ ಗೂಡಂಗಡಿ ವ್ಯಾಪಾರ ನಡೆಸಿಕೊಂಡು ಬರುತ್ತಿರುವ ವಿಠಲ ಸುವರ್ಣ ದರೋಡೆಗೊಳಗಾದವರು.

ರವಿವಾರ ಎಂದಿನಂತೆ ಗೂಡಂಗಡಿ ತೆರೆದು ವ್ಯಾಪಾರದಲ್ಲಿ ತೊಡಗಿದ್ದ ವೇಳೆ ಮಧ್ಯಾಹ್ನ ಸುಮಾರು 1 ಗಂಟೆಗೆ ಮೋಟಾರು ಸೈಕಲ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಅಂಗಡಿಯ ಸ್ವಲ್ಪ ದೂರದಲ್ಲಿ ಬೈಕ್ ನಿಲ್ಲಿಸಿದ್ದಾರೆ. ಬಳಿಕ ಬೈಕ್‌ನ ಹಿಂಬದಿ ಕುಳಿತಿದ್ದ ವ್ಯಕ್ತಿ ಅಂಗಡಿಗೆ ಬಂದು ‘ವಿಮಲ್’ ನೀಡುವಂತೆ ಕೇಳಿದ್ದಾನೆ.
ವಿಠಲ ಸುವರ್ಣ ಅವರು ವಿಮಲ್ ನೀಡಲು ಮುಂದಾದ ಸಂದರ್ಭದಲ್ಲಿ ದುಷ್ಕರ್ಮಿ ಏಕಾಏಕಿ ಅವರ ಮೇಲೆ ಎರಗಿ ಬಲವಂತವಾಗಿ ಹಿಡಿದುಕೊಂಡಿದ್ದಾನೆ. ಇದೇ ವೇಳೆ ಕುತ್ತಿಗೆಯಲ್ಲಿದ್ದ ಸುಮಾರು ಒಂದೂವರೆ ಪವನ್ ತೂಕದ ಚಿನ್ನದ ಸರವನ್ನು ಬಲವಂತವಾಗಿ ಎಳೆದುಕೊಂಡಿದ್ದಾನೆ.

ಚಿನ್ನದ ಸರ ಕಸಿದುಕೊಂಡ ಬಳಿಕ ಆರೋಪಿ ತಕ್ಷಣ ಅಂಗಡಿಯಿಂದ ಹೊರಗೆ ಓಡಿ, ಸ್ವಲ್ಪ ದೂರದಲ್ಲಿ ಸಿದ್ಧವಾಗಿ ನಿಲ್ಲಿಸಲಾಗಿದ್ದ ಮೋಟಾರು ಸೈಕಲ್ ಏರಿದ್ದಾನೆ. ಬಳಿಕ ಇಬ್ಬರೂ ಬೈಕ್‌ನಲ್ಲಿ ವೇಗವಾಗಿ ಪರಾರಿಯಾಗಿದ್ದಾರೆ.
ಘಟನೆಯಿಂದ ಬೆಚ್ಚಿಬಿದ್ದ ವಿಠಲ ಸುವರ್ಣ ಅವರು ಈ ಕುರಿತು ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಅಪರಾಧ ಕ್ರಮಾಂಕ 110/2026 ದಾಖಲಿಸಿಕೊಂಡಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 309(4) ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಘಟನೆಯಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, ಅವರ ಗುರುತು ಹಾಗೂ ಪರಾರಿಯಾಗಿರುವ ಮಾರ್ಗದ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.