



ಡೈಲಿವಾರ್ತೆ:05/ಅ./2026

ಕಾರ್ಕಳ: ಲಾರಿ ಹಿಂಬದಿ ಅಪ್ಪಳಿಸಿದ ಬೈಕ್ – ತಲೆಗೆ ಗಂಭೀರ ಗಾಯ, ಚಿಕಿತ್ಸೆ ಫಲಿಸದೆ ಯುವಕ ಸಾವು

ಕಾರ್ಕಳ, ಅ.5: ಲಾರಿಯೊಂದರ ಹಿಂಭಾಗಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ 25 ವರ್ಷದ ಯುವಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪುಲ್ಕೇರಿ ಪಡುತಿರುಪತಿ ಪೆಟ್ರೋಲ್ ಪಂಪ್ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಅ.4ರಂದು ಸಂಭವಿಸಿದೆ.
ಮೃತರನ್ನು ವಿಘ್ನೇಶ ಆಚಾರ್ಯ (25) ಎಂದು ಗುರುತಿಸಲಾಗಿದೆ.
ಅ.4ರಂದು ಸಂಜೆ ಸುಮಾರು 6.20ರ ವೇಳೆಗೆ ವಿಘ್ನೇಶ ಆಚಾರ್ಯ ಅವರು ನೋಂದಣಿ ಸಂಖ್ಯೆ ಇಲ್ಲದ ಹೊಸ ಹೋಂಡಾ ಮೋಟಾರ್ ಸೈಕಲ್‌ನಲ್ಲಿ ನಿಟ್ಟೆ ಕಡೆಯಿಂದ ಪುಲ್ಕೇರಿ ಕಡೆಗೆ ತೆರಳುತ್ತಿದ್ದರು. ಈ ವೇಳೆ ಬೈಕ್ ಅನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ, ಅದೇ ದಿಕ್ಕಿನಲ್ಲಿ ಸಂಚರಿಸುತ್ತಿದ್ದ ವಸಂತ ಸೇರಿಗಾರ ಅವರು ಚಲಾಯಿಸುತ್ತಿದ್ದ KA-20-D-3666 ನೋಂದಣಿ ಸಂಖ್ಯೆಯ ಲಾರಿಯ ಹಿಂಭಾಗಕ್ಕೆ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ವಿಘ್ನೇಶ ಆಚಾರ್ಯ ಅವರ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ತಕ್ಷಣ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತಾದರೂ, ಗಾಯಗಳ ತೀವ್ರತೆಗೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 7.06ರ ಸುಮಾರಿಗೆ ಮೃತಪಟ್ಟಿದ್ದಾರೆ.
ಘಟನೆಯ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.