



ಡೈಲಿವಾರ್ತೆ:05/ಅ./2026

ಪುತ್ತೂರಿನಲ್ಲಿ ಅಕ್ರಮ ಗೋವು ಸಾಗಾಟ: 11 ಗೋವುಗಳ ರಕ್ಷಣೆ, ಓರ್ವನ ಬಂಧನ – ಚಾಲಕ ಸೇರಿ ಇಬ್ಬರು ಪರಾರಿ

ಪುತ್ತೂರು, ಅ.5: ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದರೆನ್ನಲಾದ ಪಿಕಪ್ ವಾಹನವನ್ನು ಅಡ್ಡಗಟ್ಟಿದ ಸಂಪ್ಯ ಗ್ರಾಮಾಂತರ ಠಾಣೆ ಪೊಲೀಸರು 11 ಗೋವುಗಳನ್ನು ರಕ್ಷಿಸಿರುವ ಘಟನೆ ಬಲ್ನಾಡು ಗ್ರಾಮದ ಬಿಳಿಯೂರುಕಟ್ಟೆ ಬಳಿ ನಡೆದಿದೆ.
ಪೊಲೀಸರ ಕಾರ್ಯಾಚರಣೆ ವೇಳೆ ವಾಹನದಲ್ಲಿದ್ದ ಚಾಲಕ ಸೇರಿದಂತೆ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರಿಂದ ಪೊಲೀಸರಿಗೆ ಲಭಿಸಿದ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಪುತ್ತೂರು ತಾಲೂಕಿನ ಕುಂಜೂರುಪಂಜ ದೇವಸ್ಯದಲ್ಲಿರುವ ಮಯ್ಯ ಫಾರ್ಮ್ಸ್‌ನಿಂದ ಮುಂಜಾನೆ ಸುಮಾರು 3 ಗಂಟೆಗೆ ಪಿಕಪ್ ವಾಹನದಲ್ಲಿ ಗೋವುಗಳನ್ನು ಬುಳೇರಿಕಟ್ಟೆ ಮಾರ್ಗವಾಗಿ ಕೇರಳದತ್ತ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಗೋವುಗಳ ಕೈಕಾಲುಗಳನ್ನು ಕಟ್ಟಿ, ಅವುಗಳಿಗೆ ತೊಂದರೆಯಾಗುವ ರೀತಿಯಲ್ಲಿ ವಾಹನದಲ್ಲಿ ತುಂಬಿಸಿ ಯಾವುದೇ ಪರವಾನಗಿ ಇಲ್ಲದೆ ಸಾಗಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಬಿಳಿಯೂರುಕಟ್ಟೆ ಬಳಿ ವಾಹನವನ್ನು ಪತ್ತೆಹಚ್ಚಿ ತಡೆದು ಪರಿಶೀಲನೆ ನಡೆಸಿದಾಗ 11 ಗೋವುಗಳು ಪತ್ತೆಯಾಗಿವೆ.
ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ವಾಹನದಲ್ಲಿದ್ದ ಇಬ್ಬರು ಆರೋಪಿಗಳು ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ಗೋವುಗಳನ್ನು ಸುರಕ್ಷಿತವಾಗಿ ರಕ್ಷಿಸಿ, ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾವುದೇ ಪರವಾನಗಿ ಇಲ್ಲದೆ ಗೋವುಗಳನ್ನು ಮಾರಾಟ ಮಾಡಿದ್ದಾನೆ ಎನ್ನಲಾದ ಶಿವಪ್ರಸಾದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪರಾರಿಯಾಗಿರುವ ಇಬ್ಬರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.