ಡೈಲಿವಾರ್ತೆ:07/ಅ./2026

ಪತ್ನಿಯ ಮನೆಗೆ ತೆರಳಿದ್ದ ವೇಳೆ ದುರಂತ: ಸಿಡಿಲು ಬಡಿದು ಯುವಕ ಸಾವು!

ಕಾಸರಗೋಡು: ಪತ್ನಿಯ ಮನೆಗೆ ತೆರಳಿದ್ದ ಯುವಕನೋರ್ವ ಸಿಡಿಲು ಬಡಿದು ಮೃತಪಟ್ಟ ದಾರುಣ ಘಟನೆ ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ದೇಲಂಪಾಡಿ ಪಾಂಡಿ ಬಳವಂತಡ್ಕದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಮೃತರನ್ನು ಕುಂಟಾರು ಉಯಿತ್ತಡ್ಕ ಮಾಯಿಲಾಂಕೋಟ ನಿವಾಸಿಗಳಾದ ಅರಬಿ ಮತ್ತು ನಫೀಸಾ ದಂಪತಿಯ ಪುತ್ರ ಮುಹಮ್ಮದ್ ನೌಫಲ್ (30) ಎಂದು ಗುರುತಿಸಲಾಗಿದೆ.

ನೌಫಲ್ ಅವರು ಪಾಂಡಿ ಬಳವಂತಡ್ಕದಲ್ಲಿರುವ ಪತ್ನಿಯ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಏಕಾಏಕಿ ಸಿಡಿಲು ಬಡಿದಿದೆ. ಘಟನೆಯ ಪರಿಣಾಮ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ತಕ್ಷಣವೇ ಮುಳ್ಳೇರಿಯಾ ಸಹಕಾರಿ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ದೊರೆಯುವ ಮುನ್ನವೇ ನೌಫಲ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ತಿರುವನಂತಪುರದ ಜ್ಯೂಸ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನೌಫಲ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಘಟನೆ ಕುರಿತು ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.