ಡೈಲಿವಾರ್ತೆ:07/ಅ./2026

ಈಜಲು ತೆರಳಿದ್ದ ಮೂವರು ಬಾಲಕರು ಕೊಳದಲ್ಲಿ ಮುಳುಗಿ ದಾರುಣ ಸಾವು

ಚಿಕ್ಕಮಗಳೂರು, ಅ.7: ದಸರಾ ರಜೆಯ ಹಿನ್ನೆಲೆಯಲ್ಲಿ ಈಜಲು ತೆರಳಿದ್ದ ಮೂವರು 12 ವರ್ಷದ ಬಾಲಕರು ಕೊಳದಲ್ಲಿ ಮುಳುಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ತಾಲೂಕಿನ ಮಾರ್ಲೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಮೃತರನ್ನು ತರುಣ್, ಭವನ್ ಹಾಗೂ ಲಖಿತ್ ಎಂದು ಗುರುತಿಸಲಾಗಿದೆ. ಮೂವರೂ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಒಂದೇ ಗ್ರಾಮದ ನಿವಾಸಿಗಳಾಗಿದ್ದರೂ ಪ್ರತ್ಯೇಕ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.

ದಸರಾ ರಜೆ ಹಿನ್ನೆಲೆಯಲ್ಲಿ ಮೂವರು ಸ್ನೇಹಿತರು ಮಾರ್ಲೆ ಗ್ರಾಮದ ಸಮೀಪದ ಸಣ್ಣ ಕೊಳಕ್ಕೆ ಈಜಲು ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಈಜುವ ಬಗ್ಗೆ ಸಮರ್ಪಕ ಅರಿವಿಲ್ಲದಿದ್ದರೂ ಕೊಳದ ಆಳವಾದ ಭಾಗಕ್ಕೆ ತೆರಳಿರುವುದು ದುರಂತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಮಕ್ಕಳ ಪೈಕಿ ಓರ್ವ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗುತ್ತಿದ್ದುದನ್ನು ಕಂಡು ಉಳಿದ ಇಬ್ಬರು ಆತನನ್ನು ರಕ್ಷಿಸಲು ನೀರಿಗೆ ಇಳಿದಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ ಆಳವಾದ ನೀರಿನಲ್ಲಿ ಸಿಲುಕಿಕೊಂಡ ಮೂವರೂ ಹೊರಬರಲಾಗದೆ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸಂಜೆಯಾದರೂ ಮಕ್ಕಳು ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹುಡುಕಾಟ ಆರಂಭಿಸಿದರು. ಈ ವೇಳೆ ಕೊಳದ ದಡದಲ್ಲಿ ಮಕ್ಕಳ ಬಟ್ಟೆಗಳು ಪತ್ತೆಯಾಗಿದ್ದು, ಅನುಮಾನಗೊಂಡ ಸ್ಥಳೀಯರು ಕೊಳದಲ್ಲಿ ಶೋಧ ನಡೆಸಿದ್ದಾರೆ. ಬಳಿಕ ನೀರಿನಿಂದ ಮೂವರು ಬಾಲಕರ ಮೃತದೇಹಗಳನ್ನು ಹೊರತೆಗೆಯಲಾಯಿತು.
ಕಳೆದ ವರ್ಷ ಈ ಕೊಳದಲ್ಲಿ ಹೂಳು ತೆಗೆಯುವ ಕಾರ್ಯ ನಡೆಸಲಾಗಿದ್ದು, ಬಳಿಕ ಕೊಳದ ಆಳ ಹೆಚ್ಚಾಗಿತ್ತು ಎನ್ನಲಾಗಿದೆ. ಈ ಆಳವಾದ ಭಾಗದ ಬಗ್ಗೆ ಮಕ್ಕಳಿಗೆ ಅರಿವಿರಲಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಘಟನೆ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ನಿಖರ ಕಾರಣಗಳ ಕುರಿತು ತನಿಖೆ ಮುಂದುವರಿದಿದೆ.