ಡೈಲಿವಾರ್ತೆ:07/ಅ./2026

ವೃಂದಾವನ ಗುರುಕುಲದಲ್ಲಿ ವಿಷಕಾರಿ ಅನಿಲ ದುರಂತ: ಟ್ಯಾಂಕ್ ಸ್ವಚ್ಛತೆಗೆ ಇಳಿದ ನಾಲ್ವರು ವಿದ್ಯಾರ್ಥಿಗಳು ಬಲಿ, ಓರ್ವನ ಸ್ಥಿತಿ ಗಂಭೀರ!

ಮಥುರಾ (ಉತ್ತರ ಪ್ರದೇಶ), ಅ.7: ವೃಂದಾವನದ ಗುರುಕುಲ ಸಂಸ್ಕೃತ ವಿದ್ಯಾಲಯದ ಆವರಣದಲ್ಲಿ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಸಂಭವಿಸಿದ ಭೀಕರ ದುರಂತದಲ್ಲಿ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಮತ್ತೋರ್ವ ವಿದ್ಯಾರ್ಥಿ ಗಂಭೀರವಾಗಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.

ಮೃತರನ್ನು ಮೋನು ಕಟಾರೆ (20), ದೇವಾಂಶ್ (17), ವಿಷ್ಣು (18) ಹಾಗೂ ಆರ್ಯ (18) ಎಂದು ಗುರುತಿಸಲಾಗಿದೆ. ರುದ್ರಾಕ್ಷ ಎಂಬ ವಿದ್ಯಾರ್ಥಿ ಗಂಭೀರ ಸ್ಥಿತಿಯಲ್ಲಿದ್ದು, ಮಥುರಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗುರುಕುಲದ ಆವರಣದಲ್ಲಿರುವ ನೀರಿನ ಟ್ಯಾಂಕ್‌ನಿಂದ ದುರ್ವಾಸನೆ ಬರುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಮೊದಲಿಗೆ ಓರ್ವ ವಿದ್ಯಾರ್ಥಿಯನ್ನು ಟ್ಯಾಂಕ್ ಒಳಗೆ ಇಳಿಸಿ ಪರಿಶೀಲನೆ ನಡೆಸಲಾಗಿತ್ತು. ಆದರೆ ಆತ ಮೇಲಕ್ಕೆ ಮರಳದ ಹಿನ್ನೆಲೆಯಲ್ಲಿ, ಆತನನ್ನು ರಕ್ಷಿಸಲು ಹಾಗೂ ಪರಿಸ್ಥಿತಿ ಪರಿಶೀಲಿಸಲು ಮತ್ತಷ್ಟು ವಿದ್ಯಾರ್ಥಿಗಳನ್ನು ಟ್ಯಾಂಕ್‌ಗೆ ಇಳಿಸಲಾಗಿದೆ. ಈ ವೇಳೆ ವಿಷಕಾರಿ ಅನಿಲ ಸೇವನೆಯಿಂದ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ.

ಟ್ಯಾಂಕ್‌ಗೆ ಇಳಿದ ಐವರು ವಿದ್ಯಾರ್ಥಿಗಳ ಪೈಕಿ ನಾಲ್ವರು ಮೃತಪಟ್ಟಿದ್ದು, ಓರ್ವನನ್ನು ಗಂಭೀರ ಸ್ಥಿತಿಯಲ್ಲಿ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿದೆ. ಬಳಿಕ ಕ್ಯಾಂಪಸ್‌ನಲ್ಲಿದ್ದವರು ವಿದ್ಯಾರ್ಥಿಗಳನ್ನು ಟ್ಯಾಂಕ್‌ನಿಂದ ಹೊರತೆಗೆದಿದ್ದಾರೆ. ಆದರೆ ಅಷ್ಟರಲ್ಲಾಗಲೇ ನಾಲ್ವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಗಾಯಾಳು ವಿದ್ಯಾರ್ಥಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯ ಹಿಂದಿನ ನಿಖರ ಕಾರಣ ಹಾಗೂ ಟ್ಯಾಂಕ್‌ನಲ್ಲಿ ವಿಷಕಾರಿ ಅನಿಲ ಸೃಷ್ಟಿಯಾಗಲು ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಲಾಗಿದೆ.

ಘಟನೆ ಬಳಿಕ ಗುರುಕುಲದ ಆಯೋಜಕರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ವಿದ್ಯಾರ್ಥಿಗಳನ್ನು ಅಪಾಯಕಾರಿ ಟ್ಯಾಂಕ್‌ಗೆ ಇಳಿಸುವ ಸಂದರ್ಭದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಎಂಬ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ವೃಂದಾವನದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶ್ಲೋಕ್ ಕುಮಾರ್ ಮಾತನಾಡಿ, ಗುರುಕುಲ ಸಂಸ್ಥೆಯ ಆವರಣದಲ್ಲಿರುವ ನೀರಿನ ಟ್ಯಾಂಕ್‌ನಿಂದ ದುರ್ವಾಸನೆ ಬರುತ್ತಿರುವುದು ಗಮನಕ್ಕೆ ಬಂದಿತ್ತು. ಮೊದಲಿಗೆ ಓರ್ವ ವಿದ್ಯಾರ್ಥಿಯನ್ನು ಟ್ಯಾಂಕ್‌ಗೆ ಇಳಿಸಲಾಗಿತ್ತು. ಆತ ಮೇಲಕ್ಕೆ ಬಾರದ ಹಿನ್ನೆಲೆಯಲ್ಲಿ ಮತ್ತಷ್ಟು ವಿದ್ಯಾರ್ಥಿಗಳನ್ನು ಒಳಗೆ ಕಳುಹಿಸಲಾಗಿತ್ತು. ಈ ವೇಳೆ ನಾಲ್ವರು ಮೃತಪಟ್ಟಿದ್ದು, ಓರ್ವ ವಿದ್ಯಾರ್ಥಿ ಗಂಭೀರ ಸ್ಥಿತಿಯಲ್ಲಿದ್ದಾನೆ ಎಂದು ತಿಳಿಸಿದ್ದಾರೆ.
ಘಟನೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಸಂಪೂರ್ಣ ಪ್ರಕರಣದ ಕೂಲಂಕಷ ತನಿಖೆಗೆ ಸೂಚನೆ ನೀಡಲಾಗಿದೆ. ನಿರ್ಲಕ್ಷ್ಯ ಅಥವಾ ಸುರಕ್ಷತಾ ನಿಯಮಗಳ ಉಲ್ಲಂಘನೆ ಸೇರಿದಂತೆ ಯಾವುದೇ ತಪ್ಪು ಪತ್ತೆಯಾದಲ್ಲಿ, ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.