ಸಿಡಿಲು ಬಡಿದು ಇಂಡಿಗೋ ವಿಮಾನದ ಮುಂಭಾಗ ಜಖಂ:110 ಮಂದಿಯ ತುರ್ತು ಸುರಕ್ಷಿತ ಲ್ಯಾಂಡಿಂಗ್!

ಲಕ್ನೋ: ಪಾಟ್ನಾದಿಂದ ಲಕ್ನೋಗೆ ತೆರಳುತ್ತಿದ್ದ ಇಂಡಿಗೋ ವಿಮಾನವೊಂದು ಪ್ರತಿಕೂಲ ಹವಾಮಾನದ ನಡುವೆ ಸಿಡಿಲಿನ ಹೊಡೆತಕ್ಕೆ ಸಿಲುಕಿ, ವಿಮಾನದ ಮುಂಭಾಗದಲ್ಲಿರುವ ರೇಡೋಮ್ (ರೇಡಾರ್ ಕವರ್) ಜಖಂಗೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ 104 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಸುರಕ್ಷಿತವಾಗಿ ಪಾರಾಗಿದ್ದಾರೆ.

6E 625 ಸಂಖ್ಯೆಯ ವಿಮಾನವು ಸುಮಾರು 17,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಪ್ರತಿಕೂಲ ಹವಾಮಾನವನ್ನು ಎದುರಿಸಿದೆ. ಈ ಸಂದರ್ಭದಲ್ಲಿ ಸಿಡಿಲು ಬಡಿದಿದ್ದು, ಬಳಿಕ ಆಲಿಕಲ್ಲು ಮಳೆಯಂತಹ ಹವಾಮಾನ ಪರಿಸ್ಥಿತಿಯೂ ಎದುರಾಗಿದೆ. ಪರಿಣಾಮ ವಿಮಾನದ ಮುಂಭಾಗದ ರೇಡೋಮ್‌ಗೆ ಹಾನಿಯಾಗಿದೆ.

ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿಮಾನವನ್ನು ನಿಗದಿತ ಸಮಯಕ್ಕಿಂತ ಸುಮಾರು 8 ನಿಮಿಷ ಮುಂಚಿತವಾಗಿ ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಲಾಗಿದೆ. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಹಾಗೂ ಸಿಬ್ಬಂದಿ ಯಾವುದೇ ಅಪಾಯವಿಲ್ಲದೆ ಕೆಳಗಿಳಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಗಂಭೀರತೆಯನ್ನು ಪರಿಗಣಿಸಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ತನಿಖೆ ಆರಂಭಿಸಿದೆ. ವಿಮಾನದ ತಾಂತ್ರಿಕ ಸ್ಥಿತಿ ಹಾಗೂ ಹಾನಿಯ ಪ್ರಮಾಣವನ್ನು ಪರಿಶೀಲಿಸಲಾಗುತ್ತಿದ್ದು, DGCAಯ ಅಗತ್ಯ ಅನುಮೋದನೆ ದೊರೆತ ಬಳಿಕವಷ್ಟೇ ವಿಮಾನವನ್ನು ಮತ್ತೆ ಸೇವೆಗೆ ನಿಯೋಜಿಸಲು ಅವಕಾಶ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಇಂಡಿಗೋ ವಕ್ತಾರರು, ವಿಮಾನವು ಲ್ಯಾಂಡಿಂಗ್ ವೇಳೆ ಪ್ರತಿಕೂಲ ಹವಾಮಾನವನ್ನು ಎದುರಿಸಿದ್ದು, ಅದರ ಪರಿಣಾಮ ಮುಂಭಾಗದ ರೇಡೋಮ್‌ಗೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ. ಹಾನಿಯ ನಡುವೆಯೂ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದ್ದು, ಎಲ್ಲ ಪ್ರಯಾಣಿಕರು ಲಕ್ನೋ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಮಾನಕ್ಕೆ ಅಗತ್ಯವಿರುವ ನಿರ್ವಹಣೆ ಹಾಗೂ ತಾಂತ್ರಿಕ ಪರಿಶೀಲನಾ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಸಂಬಂಧಿತ ನಿಯಂತ್ರಕ ಸಂಸ್ಥೆಗಳ ಅನುಮೋದನೆ ಪಡೆದ ನಂತರವೇ ವಿಮಾನದ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗುವುದು ಎಂದು ಇಂಡಿಗೋ ತಿಳಿಸಿದೆ.