



ಡೈಲಿವಾರ್ತೆ:08/ಅ./2026

ಸಿಎಂ ಡಿಕೆಶಿ ವಿರುದ್ಧವೇ ಸ್ಟಿಂಗ್ ಆಪರೇಷನ್ ಸಂಚು?; ಷಡ್ಯಂತ್ರದ ಸೂತ್ರಧಾರಿ, ಹಣಕಾಸುದಾರರ ಮಾಹಿತಿ ಗೊತ್ತಿದೆ ಎಂದ ಸಿಎಂ

ಬೆಂಗಳೂರು: ಸಚಿವರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ನಡೆಸಲಾಗುತ್ತಿದೆ ಎಂಬ ಚರ್ಚೆ ರಾಜ್ಯ ರಾಜಕೀಯದಲ್ಲಿ ತೀವ್ರಗೊಂಡಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮನ್ನೂ ಸ್ಟಿಂಗ್ ಆಪರೇಷನ್ ಮೂಲಕ ಸಿಲುಕಿಸಲು ಸಂಚು ರೂಪಿಸಲಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿವಿಧ ವಿಚಾರಗಳ ಕುರಿತು ಚರ್ಚಿಸುವ ನೆಪದಲ್ಲಿ ಕೆಲವರು ತಮ್ಮನ್ನು ಭೇಟಿಯಾಗಲು ಬಂದಿದ್ದರು. ಜಿಎಸ್‌ಟಿ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ತಮ್ಮಿಂದಲೇ ಸ್ಟಿಂಗ್ ಆಪರೇಷನ್ ಆರಂಭಿಸಲು ಪ್ರಯತ್ನಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಆದರೆ, ಅವರ ನಡೆ-ನುಡಿಗಳ ಬಗ್ಗೆ ಮೊದಲೇ ಅನುಮಾನ ಮೂಡಿದ್ದರಿಂದ ಎಚ್ಚರಿಕೆ ವಹಿಸಿದ್ದಾಗಿ ಶಿವಕುಮಾರ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರ ಮೂಲಕ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗಿದ್ದು, ಸಂಬಂಧಿತ ದಾಖಲೆಗಳು ಹಾಗೂ ಫೋಟೋಗಳನ್ನು ಕೂಡ ಸಿದ್ಧಪಡಿಸಿ ಇಟ್ಟುಕೊಂಡಿರುವುದಾಗಿ ತಿಳಿಸಿದ್ದಾರೆ.
ಅಗತ್ಯಬಿದ್ದರೆ ನನ್ನ ಬಳಿ ಇರುವ ಫೋಟೋಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿರುವ ಅವರು, ಈ ಸಂಪೂರ್ಣ ಷಡ್ಯಂತ್ರದ ಹಿಂದೆ ಯಾರಿದ್ದಾರೆ, ಇದಕ್ಕೆ ಯಾರು ಹಣಕಾಸು ನೆರವು ನೀಡುತ್ತಿದ್ದಾರೆ ಹಾಗೂ ಇದರ ಪ್ರಮುಖ ಸೂತ್ರಧಾರಿ ಯಾರು ಎಂಬುದು ತಮಗೆ ಸ್ಪಷ್ಟವಾಗಿ ತಿಳಿದಿದೆ ಎಂದು ಹೇಳಿದ್ದಾರೆ.
ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಕೆಲವರು ಆತಂಕಗೊಂಡಿರುವುದನ್ನು ಪರೋಕ್ಷವಾಗಿ ಉಲ್ಲೇಖಿಸಿದ ಮುಖ್ಯಮಂತ್ರಿ, “ಕುಂಬಳಕಾಯಿ ಕಳ್ಳ ಎಂದರೆ ಕೆಲವರು ಹೆಗಲು ಮುಟ್ಟಿಕೊಳ್ಳುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.
ತಮ್ಮ ವಿರುದ್ಧ ಈ ರೀತಿಯ ಷಡ್ಯಂತ್ರಗಳು ಈ ಹಿಂದೆಯೂ ನಡೆದಿದ್ದವು ಎಂದು ನೆನಪಿಸಿಕೊಂಡ ಅವರು, 2000ರ ಆಸುಪಾಸಿನಲ್ಲಿಯೂ ತಮ್ಮನ್ನು ಸಿಲುಕಿಸಲು ಇಂತಹ ಪ್ರಯತ್ನಗಳು ನಡೆದಿದ್ದವು ಎಂದು ಹೇಳಿದರು. ಸುಖಾಸುಮ್ಮನೆ ಟ್ರ್ಯಾಪ್ ಮಾಡಲು ಕೆಲವರು ಮುಂದಾಗಬಹುದು. ಹೀಗಾಗಿ ಅಧಿಕಾರಿಗಳು ಮತ್ತು ಸಚಿವರು ಇಂತಹ ಪ್ರಯತ್ನಗಳ ಬಗ್ಗೆ ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಈಗಾಗಲೇ ಸೂಚನೆ ನೀಡಿರುವುದಾಗಿ ತಿಳಿಸಿದರು.
ಈ ಷಡ್ಯಂತ್ರದ ಹಿಂದೆ ಕರ್ನಾಟಕದವರೇ ಇದ್ದಾರೆಯೇ ಅಥವಾ ಹೊರರಾಜ್ಯದ ವ್ಯಕ್ತಿಗಳ ಕೈವಾಡವಿದೆಯೇ ಎಂಬುದನ್ನು ಸದ್ಯಕ್ಕೆ ಬಹಿರಂಗಪಡಿಸುವುದಿಲ್ಲ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು. “ಕಾಲವೇ ಎಲ್ಲದಕ್ಕೂ ತಕ್ಕ ಉತ್ತರ ನೀಡಲಿದೆ” ಎಂದು ಹೇಳುವ ಮೂಲಕ ಪ್ರಕರಣದ ಕುರಿತು ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.