



ಡೈಲಿವಾರ್ತೆ:09/ಅ./2026

ಸೌದಿ ಅರೇಬಿಯಾದಲ್ಲಿ ಭದ್ರತಾ ಆತಂಕ: ಹೌತಿ ದಾಳಿಗಳ ಭೀತಿ – ಮನೆಯೊಳಗೇ ಇರುವಂತೆ
ಭಾರತೀಯರಿಗೆ ರಾಯಭಾರ ಕಚೇರಿಯ ಸೂಚನೆ!

ರಿಯಾದ್: ಸೌದಿ ಅರೇಬಿಯಾದಲ್ಲಿ ಭದ್ರತಾ ಪರಿಸ್ಥಿತಿ ಬಿಗಡಾಯಿಸಿರುವ ಹಿನ್ನೆಲೆಯಲ್ಲಿ, ಅಲ್ಲಿರುವ ಭಾರತೀಯ ಪ್ರಜೆಗಳು ಅತ್ಯಂತ ಜಾಗರೂಕರಾಗಿರಬೇಕು ಹಾಗೂ ಅನಗತ್ಯವಾಗಿ ಮನೆಯಿಂದ ಹೊರಗೆ ತೆರಳಬಾರದು ಎಂದು ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಕಟ್ಟುನಿಟ್ಟಿನ ಸಲಹೆ ನೀಡಿದೆ.
ಇರಾನ್ ಬೆಂಬಲಿತ ಯೆಮೆನ್ ಮೂಲದ ಹೌತಿ ಬಂಡುಕೋರರ ದಾಳಿಯ ಬೆದರಿಕೆ ಹಿನ್ನೆಲೆಯಲ್ಲಿ ಭಾರತೀಯರ ಸುರಕ್ಷತೆಗೆ ಆದ್ಯತೆ ನೀಡಿರುವ ರಾಯಭಾರ ಕಚೇರಿ, ಸ್ಥಳೀಯ ಅಧಿಕಾರಿಗಳು ಅಧಿಕೃತ ಮಾರ್ಗಗಳ ಮೂಲಕ ಹೊರಡಿಸುವ ಭದ್ರತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದೆ. ಅಲ್ಲದೆ, ಪ್ರಸ್ತುತ ನಡೆಯುತ್ತಿರುವ ಘಟನೆಗಳಿಗೆ ಸಂಬಂಧಿಸಿದ ವೀಡಿಯೊಗಳು, ದೃಶ್ಯಗಳು ಹಾಗೂ ದೃಢೀಕರಿಸದ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಭಾರತೀಯರಿಗೆ ಸೂಚಿಸಲಾಗಿದೆ.
ರಾಯಭಾರ ಕಚೇರಿ ಸೇವೆ ಎಂದಿನಂತೆ
ಭದ್ರತಾ ಆತಂಕದ ನಡುವೆಯೂ ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಜೆಡ್ಡಾದಲ್ಲಿರುವ ಭಾರತೀಯ ಕಾನ್ಸುಲೇಟ್ ಹಾಗೂ VFS ಸಂಸ್ಥೆಯ ಮೂಲಕ ಒದಗಿಸಲಾಗುವ ಸೇವೆಗಳು ಸದ್ಯ ಎಂದಿನಂತೆ ಮುಂದುವರಿಯುತ್ತಿವೆ ಎಂದು ತಿಳಿಸಲಾಗಿದೆ. ಪರಿಸ್ಥಿತಿಯ ಬೆಳವಣಿಗೆಗಳನ್ನು ಗಮನಿಸಿ ಅಗತ್ಯವಿದ್ದಾಗ ಸೂಕ್ತ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುವುದು ಎಂದು ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.
ಸೌದಿ ಅರೇಬಿಯಾದಲ್ಲಿರುವ ಭಾರತೀಯರಿಗೆ ನೆರವು ಒದಗಿಸಲು ಪ್ರವಾಸಿ ಭಾರತೀಯ ಸಹಾಯಕ ಕೇಂದ್ರದ (PBSK) 24 ಗಂಟೆಗಳ ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ. ಅಗತ್ಯವಿರುವವರು ಸ್ಥಳೀಯ ಟೋಲ್‌ಫ್ರೀ ಸಂಖ್ಯೆ 8002471234 ಮೂಲಕ ಸಂಪರ್ಕಿಸಬಹುದು ಎಂದು ಸೂಚಿಸಲಾಗಿದೆ.
ಅ.10ರವರೆಗೆ ವಿಮಾನ ಹಾರಾಟ ರದ್ದು:
ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಏರ್ ಇಂಡಿಯಾ, ಇಂಡಿಗೋ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಗಳು ರಿಯಾದ್‌ಗೆ ನಿಗದಿಪಡಿಸಿದ್ದ ವಿಮಾನಗಳ ಹಾರಾಟವನ್ನು ಅಕ್ಟೋಬರ್ 10ರವರೆಗೆ ರದ್ದುಗೊಳಿಸಿವೆ ಎಂದು ವರದಿಯಾಗಿದೆ. ಈ ನಿರ್ಧಾರದಿಂದ ಪ್ರಯಾಣಕ್ಕೆ ತೊಂದರೆಗೊಳಗಾದ ಪ್ರಯಾಣಿಕರಿಗೆ ಪೂರ್ಣ ಪ್ರಮಾಣದ ಟಿಕೆಟ್ ಹಣವನ್ನು ಮರುಪಾವತಿಸಲಾಗುವುದು ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.
ವಿಮಾನ ಪ್ರಯಾಣಕ್ಕೆ ಯೋಜನೆ ರೂಪಿಸಿರುವವರು ತಮ್ಮ ವಿಮಾನದ ಪ್ರಸ್ತುತ ಸ್ಥಿತಿಯನ್ನು ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳ ಅಧಿಕೃತ ಸಂಪರ್ಕ ಮಾಧ್ಯಮಗಳ ಮೂಲಕ ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ.
ವಿಮಾನ ನಿಲ್ದಾಣ, ಸೇನಾ ನೆಲೆಗಳೇ ಗುರಿ?
ಅಮೆರಿಕಕ್ಕೆ ಸೌದಿ ಅರೇಬಿಯಾ ನೀಡುತ್ತಿರುವ ಬೆಂಬಲದ ಹಿನ್ನೆಲೆಯಲ್ಲಿ, ಇರಾನ್ ಬೆಂಬಲಿತ ಹೌತಿ ಗುಂಪು ಇತ್ತೀಚಿನ ದಿನಗಳಲ್ಲಿ ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳು, ಸೇನಾ ನೆಲೆಗಳು ಹಾಗೂ ತೈಲ ಸಂಸ್ಕರಣಾ ಮತ್ತು ಉತ್ಪಾದನಾ ಸ್ಥಾವರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿರುವ ಭಾರತೀಯರ ಸುರಕ್ಷತೆಯ ಕುರಿತು ಆತಂಕ ಹೆಚ್ಚಾಗಿದೆ. ಪರಿಸ್ಥಿತಿಯ ಸೂಕ್ಷ್ಮತೆಯನ್ನು ಪರಿಗಣಿಸಿ ಭಾರತೀಯರು ವದಂತಿಗಳಿಗೆ ಕಿವಿಗೊಡದೆ, ಅಧಿಕೃತ ಮೂಲಗಳಿಂದ ದೊರೆಯುವ ಮಾಹಿತಿಯನ್ನಷ್ಟೇ ಅವಲಂಬಿಸಬೇಕು. ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸುವುದರ ಜೊತೆಗೆ ಅನಗತ್ಯ ಪ್ರಯಾಣವನ್ನು ತಪ್ಪಿಸಿ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ರಾಯಭಾರ ಕಚೇರಿ ಸಲಹೆ ನೀಡಿದೆ.