ಡೈಲಿವಾರ್ತೆ:09/ಅ./2026

ಬ್ರಹ್ಮಾವರ: ಜಮೀನು ನೋಂದಣಿಯಲ್ಲಿ ನಕಲಿ ದಾಖಲೆ ಬಳಕೆ – ಐವರ ವಿರುದ್ಧ ಪ್ರಕರಣ ದಾಖಲು

ಬ್ರಹ್ಮಾವರ: ನಕಲಿ ದಾಖಲೆಗಳನ್ನು ಬಳಸಿ ಕೋಟ ಹೋಬಳಿಯ ಮೂಡಹಡು ಗ್ರಾಮದ 53.66 ಎಕರೆ ಜಮೀನನ್ನು ವರ್ಗಾವಣೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ 2026ರ ಸೆಪ್ಟೆಂಬರ್ 17ರಂದು ನೋಂದಣಿಯಾಗಿದೆ ಎನ್ನಲಾದ ದಸ್ತಾವೇಜು ಸಂಖ್ಯೆ 3291/2026-27 ಈ ಪ್ರಕರಣದ ಕೇಂದ್ರಬಿಂದುವಾಗಿದೆ. ಈ ದಸ್ತಾವೇಜಿನ ಪ್ರಕಾರ, ಮೊದಲ ಆರೋಪಿಯಾದ ಮೊಹಮ್ಮದ್ ಶಕೀರ್ ಅವರು ಬ್ರಹ್ಮಾವರ ತಾಲೂಕು, ಕೋಟ ಹೋಬಳಿಯ ಮೂಡಹಡು ಗ್ರಾಮದ ಸರ್ವೆ ನಂಬರ್ 1ರಲ್ಲಿ ಒಳಗೊಂಡಿರುವ 53.66 ಎಕರೆ ಜಮೀನನ್ನು ನಾಲ್ಕನೇ ಆರೋಪಿಯಾದ ರಮಾ ಜೆ. ರಾವ್ ಹಾಗೂ ಐದನೇ ಆರೋಪಿಯಾದ ಯು. ಅಭಿಷೇಕ್ ಅವರಿಗೆ ವರ್ಗಾವಣೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸದರಿ ದಸ್ತಾವೇಜಿನಲ್ಲಿ ಮಾರಾಟಗಾರರಾಗಿ ಗುರುತಿಸಿಕೊಂಡಿರುವ ಮೊದಲ ಆರೋಪಿಯು ನಕಲಿ ದಾಖಲೆಗಳನ್ನು ಬಳಸಿಕೊಂಡು ನೋಂದಣಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ದಸ್ತಾವೇಜಿನಲ್ಲಿರುವ ದಾಖಲೆಗಳನ್ನು ಮರುಪರಿಶೀಲನೆಗೆ ಒಳಪಡಿಸಲಾಗಿತ್ತು.

ಪರಿಶೀಲನೆಯ ವೇಳೆ ಮೊದಲ ಆರೋಪಿಯು ಗುರುತಿನ ದಾಖಲೆಯಾಗಿ ಸಲ್ಲಿಸಿದ್ದ ಪಾಸ್‌ಪೋರ್ಟ್ ಹಾಗೂ ಆದಾಯ ತೆರಿಗೆ ಇಲಾಖೆಯ ಪಾನ್ ಕಾರ್ಡ್‌ನಲ್ಲಿ ಯಾವುದೇ ಸಂಶಯಾಸ್ಪದ ಅಂಶಗಳು ಕಂಡುಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದರೆ, ನೋಂದಣಿ ಪ್ರಕ್ರಿಯೆಯಲ್ಲಿ ಹಾಜರಾದ ವ್ಯಕ್ತಿಯ ನೈಜ ಗುರುತನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಅಧಿಕಾರಿಗಳು ಮುಂದಿನ ಪರಿಶೀಲನೆಗೆ ಮುಂದಾಗಿದ್ದರು.
ಈ ದಸ್ತಾವೇಜಿನ ನೋಂದಣಿ ಸಂದರ್ಭದಲ್ಲಿ ಪಕ್ಷಕಾರರನ್ನು ಗುರುತಿಸಿದ್ದ ಎರಡನೇ ಆರೋಪಿಯಾದ ಜಿ.ವಿ. ಗಿರೀಶ್ ಉಪಾಧ್ಯ ಹಾಗೂ ಮೂರನೇ ಆರೋಪಿಯಾದ ಶ್ಯಾಮ್ ಪ್ರಸಾದ್ ಅವರಿಗೆ ಕಚೇರಿಯಿಂದ ನೋಟಿಸ್ ಜಾರಿಗೊಳಿಸಲಾಗಿತ್ತು. ಆದರೂ, ಈವರೆಗೆ ಅವರು ಕಚೇರಿಗೆ ಹಾಜರಾಗಿ ಸೂಕ್ತ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಬ್ರಹ್ಮಾವರದ ಪ್ರಜಾಸೌಧದಲ್ಲಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಹಿರಿಯ ಉಪನೋಂದಣಾಧಿಕಾರಿ ಎಂ. ನಾಗೇಶ್ ಅವರು ನೀಡಿದ ದೂರಿನ ಆಧಾರದ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 187/2026ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(4), 319(2), 336(3), 340(2) ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಜಮೀನು ವರ್ಗಾವಣೆ ಪ್ರಕ್ರಿಯೆ, ದಾಖಲೆಗಳ ಸತ್ಯಾಸತ್ಯತೆ ಮತ್ತು ನೋಂದಣಿ ಸಂದರ್ಭದಲ್ಲಿ ವ್ಯಕ್ತಿಗಳನ್ನು ಗುರುತಿಸಿದವರ ಪಾತ್ರದ ಕುರಿತು ತನಿಖೆ ನಡೆಯಬೇಕಿದೆ.