



ಡೈಲಿವಾರ್ತೆ:09/ಅ./2026

ಉಡುಪಿ: ಫೇಸ್‌ಬುಕ್‌ನಲ್ಲಿ ಹೂಡಿಕೆ ಆಮಿಷ: 75ರ ವೃದ್ಧನಿಗೆ ₹14.35 ಲಕ್ಷ ವಂಚನೆ!

ಉಡುಪಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಭಾರೀ ಲಾಭ ಗಳಿಸಬಹುದು ಎಂಬ ಆಮಿಷವೊಡ್ಡಿ, 75 ವರ್ಷದ ವೃದ್ಧರೊಬ್ಬರಿಗೆ ಸೈಬರ್ ವಂಚಕರು ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.
ಫೇಸ್‌ಬುಕ್ ಮೂಲಕ ಪರಿಚಯವಾದ ಟ್ರೇಡಿಂಗ್ ಲಿಂಕ್ ನಂಬಿ ಹಣ ಹೂಡಿದ್ದ ರಮೇಶ ಶೆಟ್ಟಿ (75) ಅವರು ಒಟ್ಟು ₹14,35,724 ಕಳೆದುಕೊಂಡಿರುವುದಾಗಿ ದೂರು ನೀಡಿದ್ದಾರೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಜುಲೈ 29, 2026ರಂದು ರಮೇಶ ಶೆಟ್ಟಿ ಅವರ ಫೇಸ್‌ಬುಕ್ ಖಾತೆಗೆ HDFC Security ಹೆಸರಿನಲ್ಲಿ ಲಿಂಕ್‌ವೊಂದು ಬಂದಿತ್ತು. ಅದರ ಮೂಲಕ ಅವರಿಗೆ ಹೈ ನೆಟ್‌ವರ್ಥ್ ಇನ್ವೆಸ್ಟರ್ ಯೂಸರ್ ಐಡಿ ನೀಡಲಾಗಿದ್ದು, ಅದರ ಆಧಾರದಲ್ಲಿ ಟ್ರೇಡಿಂಗ್ ನಡೆಸುವಂತೆ ಸೂಚಿಸಲಾಗಿತ್ತು. ಆರಂಭದಲ್ಲಿ ₹40,000 ಹೂಡಿಕೆ ಮಾಡಿದಾಗ ಶೇ.5ರಷ್ಟು ಲಾಭ ತೋರಿಸಲಾಗಿತ್ತು. ಇದನ್ನು ನಂಬಿದ ಅವರು ಆಗಸ್ಟ್ 18ರಂದು ₹80,000 ಹಾಗೂ ₹50,000 ಹೂಡಿಕೆ ಮಾಡಿದ್ದರು. ಅದೇ ದಿನ ₹1,25,000 ಮೊತ್ತದ ಟ್ರೇಡಿಂಗ್ ಕೂಡ ನಡೆಸಿದ್ದರು.
ನಂತರವೂ ವಿವಿಧ ಹಂತಗಳಲ್ಲಿ ಹಣ ಹೂಡಿಕೆ ಮಾಡುವಂತೆ ಸೂಚಿಸಲಾಗಿತ್ತು. ಇದನ್ನು ನಂಬಿದ ರಮೇಶ ಶೆಟ್ಟಿ ಅವರು ಹಂತ ಹಂತವಾಗಿ ಹಣ ವರ್ಗಾಯಿಸಿದ್ದರು.
ಐಪಿಒ ಹೆಸರಿನಲ್ಲಿ ಮತ್ತಷ್ಟು ಹಣಕ್ಕೆ ಒತ್ತಡ
ಸೆಪ್ಟೆಂಬರ್ 1ರಂದು ಅವರಿಗೆ ESDS Software Solution Ltd. ಕಂಪನಿಯ 3,400 ಷೇರುಗಳು ತಲಾ ₹272ರಂತೆ ಹಂಚಿಕೆಯಾಗಿದ್ದು, ಅವುಗಳ ಒಟ್ಟು ಮೌಲ್ಯ ₹9,24,800 ಎಂದು ಸಂದೇಶ ಬಂದಿತ್ತು. ಆದರೆ ತಾವು ಐಪಿಒಗೆ ಅರ್ಜಿ ಸಲ್ಲಿಸಿಲ್ಲ ಮತ್ತು ಅಷ್ಟು ಹಣ ತಮ್ಮ ಬಳಿ ಇಲ್ಲ ಎಂದು ತಿಳಿಸಿದ ರಮೇಶ ಶೆಟ್ಟಿ, ಆ ಹಂಚಿಕೆಯನ್ನು ರದ್ದುಗೊಳಿಸುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ.
ಆದರೆ, ಐಪಿಒ ಮೊತ್ತವನ್ನು ಪಾವತಿಸುವಂತೆ ಒತ್ತಡ ಹೇರಲಾಗಿದ್ದು, ಅನಿವಾರ್ಯವಾಗಿ ಸಾಲ ಮಾಡಿ ₹9,24,800 ಪಾವತಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಹಣ ಹಿಂಪಡೆಯಲು ಯತ್ನಿಸಿದಾಗ ಮತ್ತೊಂದು ಬೇಡಿಕೆ:
ನಂತರ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಅವಕಾಶ ನೀಡದೆ, ಲಾಭಾಂಶದ ಶೇ.10ರ ಮೊತ್ತವೆಂದು ಹೇಳಿ ₹5,10,724 ಪಾವತಿಸುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಹಣ ಪಾವತಿಸದಿದ್ದರೆ ಹೂಡಿಕೆ ಮೊತ್ತವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಲಾಗಿತ್ತು. ಇದರಿಂದ ಮತ್ತೆ ಹಣ ಪಾವತಿಸಿದ್ದಾಗಿ ರಮೇಶ ಶೆಟ್ಟಿ ದೂರಿನಲ್ಲಿ ವಿವರಿಸಿದ್ದಾರೆ.
ಆದರೆ, ಹಣ ಪಾವತಿಸಿದ ಬಳಿಕ ವಂಚಕರು ವಾಟ್ಸ್‌ಆ್ಯಪ್ ಸಂದೇಶಗಳಿಗೆ ಪ್ರತಿಕ್ರಿಯಿಸುವುದನ್ನೂ, ಫೋನ್ ಕರೆಗಳನ್ನು ಸ್ವೀಕರಿಸುವುದನ್ನೂ ನಿಲ್ಲಿಸಿದ್ದಾರೆ ಎನ್ನಲಾಗಿದೆ. ಹೂಡಿಕೆ ಮತ್ತು ಟ್ರೇಡಿಂಗ್ ಹೆಸರಿನಲ್ಲಿ ವಿವಿಧ ಹಂತಗಳಲ್ಲಿ ಹಣ ಪಡೆದು ವಂಚಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 137/2026ರಡಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66 ಹಾಗೂ ಭಾರತೀಯ ನ್ಯಾಯ ಸಂಹಿತೆಯ ಕಲಂ 318(4)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.