



ಡೈಲಿವಾರ್ತೆ:09/ಅ./2026

ಮಂಗಳೂರು: ತಂದೆಯ ನಿಗೂಢ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಮಗಳ ವಿರುದ್ಧ ಕೊಲೆ ಆರೋಪ: ಸಮಾಧಿಯಿಂದ ಶವ ಹೊರತೆಗೆದು ಎಫ್‌ಎಸ್‌ಎಲ್ ಪರೀಕ್ಷೆ

ಮಂಗಳೂರು, ಅ. 9: ಆಸ್ತಿ ವಿಚಾರವಾಗಿ ತಂದೆಯನ್ನು ಹತ್ಯೆಗೈದು, ಮರಣೋತ್ತರ ಪರೀಕ್ಷೆಯನ್ನೂ ನಡೆಸದೆ ತರಾತುರಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂಬ ಗಂಭೀರ ಆರೋಪ ಮಂಗಳೂರಿನಲ್ಲಿ ಕೇಳಿಬಂದಿದೆ.
ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿ ಆಲ್ಬರ್ಟ್ ರೇಗೋ (ಆಲ್ಬರ್ಟ್ ರೇಗೊ) ಅವರ ಸಂಶಯಾಸ್ಪದ ಸಾವಿಗೆ ಸಂಬಂಧಿಸಿದಂತೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಕುಂಟಿಕಾನ ಸಮೀಪದ ದೇರೆಬೈಲ್ ಚರ್ಚ್ ಆವರಣದ ದಫನ ಭೂಮಿಯಿಂದ ಅವರ ಶವವನ್ನು ಹೊರತೆಗೆದು ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ಪರೀಕ್ಷೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ.
ಕಳೆದ ಜುಲೈ 19ರಂದು ಆಲ್ಬರ್ಟ್ ರೇಗೋ ಅವರು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಅವರ ಸಾವಿನ ಕುರಿತು ಕುಟುಂಬಸ್ಥರಿಗೆ ಹಾಗೂ ಸ್ಥಳೀಯರಿಗೆ ಸೂಕ್ತ ಮಾಹಿತಿ ನೀಡದೆ, ಜೊತೆಯಲ್ಲಿದ್ದ ಮಗಳು ಮಾಯಾ ರೇಗೋ ಅವರು ಆಪ್ತರ ನೆರವಿನೊಂದಿಗೆ ಮರಣೋತ್ತರ ಪರೀಕ್ಷೆ ನಡೆಸದೆಯೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬೆಳವಣಿಗೆಯಿಂದ ಅನುಮಾನಗೊಂಡ ಆಲ್ಬರ್ಟ್ ಅವರ ಸ್ನೇಹಿತ ಹೆರಾಲ್ಡ್ ಪಿರೇರಾ ಅವರು ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಮಾಯಾ ರೇಗೋ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಆಸ್ತಿಗಾಗಿ ಕಿರುಕುಳ ನೀಡಿದ ಆರೋಪ:
ಆಲ್ಬರ್ಟ್ ರೇಗೋ ಅವರು ಈ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಸಾಕಷ್ಟು ಆಸ್ತಿ ಸಂಪಾದಿಸಿದ್ದರು ಎನ್ನಲಾಗಿದೆ. ಅವರ ಇಬ್ಬರು ಮಕ್ಕಳು ಬೇರೆ ಬೇರೆ ಕಡೆಗಳಲ್ಲಿ ನೆಲೆಸಿದ್ದು, ಒಬ್ಬಳು ಮಗಳು ಮಾತ್ರ ಅವರೊಂದಿಗೆ ವಾಸಿಸುತ್ತಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ಬಲವಂತವಾಗಿ ವೀಲುನಾಮೆ ಬರೆಸಿಕೊಂಡಿದ್ದಾಳೆ ಎಂದು ಆಲ್ಬರ್ಟ್ ತಮ್ಮ ಸ್ನೇಹಿತರ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ. ತನಗೆ ನಿರಂತರವಾಗಿ ಹಲ್ಲೆ ನಡೆಸಿ ಕಿರುಕುಳ ನೀಡಲಾಗುತ್ತಿದೆ. ತನಗೇನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಮಗಳ ಕಿರುಕುಳವೇ ಕಾರಣವಾಗಿರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾಗಿ ದೂರುದಾರರು ತಿಳಿಸಿದ್ದಾರೆ.
ಮಾದಕ ವ್ಯಸನದ ಆರೋಪವನ್ನೂ ಎದುರಿಸುತ್ತಿರುವ ಮಾಯಾ ರೇಗೋ, ಹಣ ಮತ್ತು ಆಸ್ತಿಯ ವಿಚಾರವಾಗಿ ಇತರರ ನೆರವಿನಿಂದ ತಂದೆಯನ್ನು ಹತ್ಯೆಗೈದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕೃತ್ಯಕ್ಕೆ ಬೋಂದೆಲ್‌ನ ವೈದ್ಯರೊಬ್ಬರು ಹಾಗೂ ಪೊಲೀಸ್ ಪೇದೆಯೊಬ್ಬರು ಸಹಕರಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಆದರೆ, ಈ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ದೃಢಪಡಬೇಕಿದೆ.
ದಫನ ಭೂಮಿಯಲ್ಲಿ ಪೊಲೀಸ್ ಕಾರ್ಯಾಚರಣೆ:
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಪೊಲೀಸರು ವಿವಿಧ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಆಲ್ಬರ್ಟ್ ರೇಗೋ ಅವರ ಸಾವಿನ ಹಿಂದಿನ ನೈಜ ಕಾರಣ ಪತ್ತೆಹಚ್ಚಲು ಮುಂದಾಗಿದ್ದಾರೆ. ಇದರ ಭಾಗವಾಗಿ ದೇರೆಬೈಲ್ ಚರ್ಚ್ ಆವರಣದ ದಫನ ಭೂಮಿಯಲ್ಲಿ ಹೂಳಲಾಗಿದ್ದ ಅವರ ಶವವನ್ನು ಹೊರತೆಗೆದು ಪರೀಕ್ಷೆ ನಡೆಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ.
ಸ್ಥಳಕ್ಕೆ ಪೊಲೀಸರು ಹಾಗೂ ಎಫ್‌ಎಸ್‌ಎಲ್ ತಜ್ಞರು ಆಗಮಿಸಿದ್ದು, ಆರೋಪಿತೆ ಮಾಯಾ ರೇಗೋ ಮತ್ತು ದೂರುದಾರ ಹೆರಾಲ್ಡ್ ಪಿರೇರಾ ಅವರ ಸಮ್ಮುಖದಲ್ಲಿ ಅಸ್ಥಿಪಂಜರದ ಪರಿಶೀಲನೆ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಆಲ್ಬರ್ಟ್ ರೇಗೋ ಅವರ ಸಾವು ಸಹಜವಾಗಿತ್ತೇ ಅಥವಾ ಅದರ ಹಿಂದೆ ಅಪರಾಧ ಕೃತ್ಯ ನಡೆದಿದೆಯೇ ಎಂಬುದನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಈ ಪರೀಕ್ಷೆ ಮಹತ್ವ ಪಡೆದುಕೊಂಡಿದೆ. ಎಫ್‌ಎಸ್‌ಎಲ್ ಪರೀಕ್ಷೆಯ ವರದಿ ಹಾಗೂ ಪೊಲೀಸ್ ತನಿಖೆಯಿಂದ ಪ್ರಕರಣದ ಹಲವು ಅನುಮಾನಗಳಿಗೆ ಉತ್ತರ ದೊರೆಯುವ ನಿರೀಕ್ಷೆಯಿದೆ.