ಡೈಲಿವಾರ್ತೆ:09/ಅ./2026

ಶನಿವಾರ ದೆಹಲಿಯಲ್ಲಿ ಕಾಕ್ರೋಚ್ ಪ್ರತಿಭಟನೆಯ ಕಿಚ್ಚು: ಇಂದು ರಾತ್ರಿ 10 ಗಂಟೆಯಿಂದಲೇ ಇಂಟರ್‌ನೆಟ್ ಬಂದ್‌!

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಸೇರಿದಂತೆ ಕೆಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿರುವ ಬೆನ್ನಲ್ಲೇ, ರಾಷ್ಟ್ರ ರಾಜಧಾನಿಯ ಮಧ್ಯಭಾಗದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲು ಆದೇಶ ಹೊರಡಿಸಲಾಗಿದೆ.

ಜನಪಥ್‌-ಕರ್ತವ್ಯ ಪಥ್‌ ಕ್ರಾಸಿಂಗ್‌ನ ಸುತ್ತಮುತ್ತಲಿನ 4 ಕಿ.ಮೀ. ವ್ಯಾಪ್ತಿಯಲ್ಲಿ ಅಕ್ಟೋಬರ್ 9ರ ರಾತ್ರಿ 10 ಗಂಟೆಯಿಂದ ಅಕ್ಟೋಬರ್ 10ರ ರಾತ್ರಿ 10 ಗಂಟೆಯವರೆಗೆ ಇಂಟರ್ನೆಟ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ತಿಳಿಸಲಾಗಿದೆ.

ಟೆಲಿಕಾಂ ಕಂಪನಿಗಳಿಗೆ ಪೊಲೀಸರ ಸೂಚನೆ:
ಗೃಹ ಸಚಿವಾಲಯದ ಅನುಮೋದನೆಯೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಇಂಟರ್ನೆಟ್ ಸ್ಥಗಿತದ ಆದೇಶವನ್ನು ಜಾರಿಗೊಳಿಸುವಂತೆ ದೆಹಲಿ ಪೊಲೀಸರು ಏರ್‌ಟೆಲ್‌, ವೊಡಾಫೋನ್ ಐಡಿಯಾ (ವಿಐ), ಜಿಯೋ ಹಾಗೂ ಎಂಟಿಎನ್‌ಎಲ್‌ ಸೇರಿದಂತೆ ಪ್ರಮುಖ ಟೆಲಿಕಾಂ ಸೇವಾ ಕಂಪನಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸಿ ಅಕ್ಟೋಬರ್ 10ರಂದು ಸಿಜೆಪಿ ಸೇರಿದಂತೆ ಕೆಲವು ವಿದ್ಯಾರ್ಥಿ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಲು ಉದ್ದೇಶಿಸಿವೆ. ಆದರೆ, ಈ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಅನುಮತಿ ನಿರಾಕರಣೆಗೆ ಪೊಲೀಸರ ಸ್ಪಷ್ಟನೆ:
ಪ್ರತಿಭಟನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸುವಲ್ಲಿ ವಿಳಂಬವಾಗಿರುವುದೇ ನಿರಾಕರಣೆಗೆ ಪ್ರಮುಖ ಕಾರಣ ಎಂದು ನವದೆಹಲಿ ವಲಯದ ಜಂಟಿ ಪೊಲೀಸ್ ಆಯುಕ್ತೆ ನೂಪುರ್ ಪ್ರಸಾದ್ ತಿಳಿಸಿದ್ದಾರೆ.
ಈ ಹಿಂದೆ ಸಿಜೆಪಿ ಆಯೋಜಿಸಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ನಿಯಮಗಳ ಉಲ್ಲಂಘನೆಯಾಗಿದ್ದ ಸಂಗತಿಯನ್ನೂ ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಪ್ರತಿಭಟನೆಗೆ ಅನುಮತಿ ನೀಡದಿರಲು ನಿರ್ಧರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ನಡೆಯಬೇಕಿದ್ದ ಪ್ರತಿಭಟನೆಗೆ ಅನುಮತಿ ನಿರಾಕರಿಸಿರುವುದು ಹಾಗೂ ಪ್ರಮುಖ ಪ್ರದೇಶದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲು ಆದೇಶಿಸಿರುವುದು ರಾಷ್ಟ್ರ ರಾಜಧಾನಿಯಲ್ಲಿ ರಾಜಕೀಯ ಚಟುವಟಿಕೆಗಳತ್ತ ಗಮನ ಸೆಳೆದಿದೆ