



ಡೈಲಿವಾರ್ತೆ:10/ಅ./2026

ಇಬ್ಬರ ಜೀವಕ್ಕೆ ಎರವಾಗಿದ್ದ ಕಾಡಾನೆ ಇನ್ನಿಲ್ಲ: ಸಕ್ರೆಬೈಲಿನಲ್ಲಿ ಶೌರ್ಯನ ಬದುಕು ಅಂತ್ಯ!

ಶಿವಮೊಗ್ಗ: ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಭಾಗದಲ್ಲಿ ಇಬ್ಬರ ಸಾವಿಗೆ ಕಾರಣವಾಗಿದ್ದ ಕಾಡಾನೆ ಶೌರ್ಯ (35), ಸಕ್ರೆಬೈಲು ಆನೆ ಬಿಡಾರದಲ್ಲಿ ಮೃತಪಟ್ಟಿದೆ. ಎಡಗಾಲಿನ ಹಿಂಭಾಗದ ತೊಡೆಯಲ್ಲಿದ್ದ ತೀವ್ರ ಗಾಯ ಕೊಳೆತ ಸ್ಥಿತಿಗೆ ತಲುಪಿದ್ದರಿಂದ ಕಳೆದ ಮೂರು ತಿಂಗಳಿಂದ ತೀವ್ರ ನೋವು ಅನುಭವಿಸುತ್ತಿದ್ದ ಆನೆಗೆ ನೀಡಲಾಗುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಕೊನೆಯುಸಿರೆಳೆದಿದೆ.
ಶೌರ್ಯದ ಎಡಗಾಲಿನ ಹಿಂಭಾಗದ ತೊಡೆಯ ಭಾಗದಲ್ಲಿ ಗಂಭೀರ ಗಾಯವಾಗಿತ್ತು. ದಿನಕಳೆದಂತೆ ಗಾಯದ ಸ್ಥಿತಿ ಮತ್ತಷ್ಟು ಬಿಗಡಾಯಿಸಿ ಕೊಳೆತ ಹಂತಕ್ಕೆ ತಲುಪಿದ್ದರಿಂದ ಆನೆಯ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿತ್ತು. ಅರಣ್ಯ ಇಲಾಖೆಯ ಪಶುವೈದ್ಯರು ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದರು. ಇತ್ತೀಚೆಗೆ ಹಾತಿ ಸಂಸ್ಥೆಯ ವೈದ್ಯರ ತಂಡವೂ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿತ್ತು. ಆದರೂ ಆನೆಯ ಆರೋಗ್ಯದಲ್ಲಿ ನಿರೀಕ್ಷಿತ ಸುಧಾರಣೆ ಕಂಡುಬರದೆ ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.
ಇಬ್ಬರ ಸಾವಿಗೆ ಕಾರಣವಾಗಿದ್ದ ಕಾಡಾನೆ:

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪ್ರದೇಶದಲ್ಲಿ ಇಬ್ಬರ ಸಾವಿಗೆ ಕಾರಣವಾಗಿದ್ದ ಶೌರ್ಯ ಆನೆಯನ್ನು ಅರಣ್ಯ ಇಲಾಖೆ 2026ರ ಫೆಬ್ರವರಿ 22ರಂದು ಸೆರೆಹಿಡಿದಿತ್ತು. ಬಳಿಕ ಅದನ್ನು ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಸ್ಥಳಾಂತರಿಸಲಾಗಿತ್ತು. ಇಲ್ಲಿ ಸುಮಾರು ಮೂರು ತಿಂಗಳ ಕಾಲ ಕ್ರಾಲ್‌ನಲ್ಲಿ ಇರಿಸಿ ಪಳಗಿಸುವ ಪ್ರಕ್ರಿಯೆ ನಡೆಸಲಾಗಿತ್ತು.
ಮೇ ತಿಂಗಳಲ್ಲಿ ಕ್ರಾಲ್‌ನಿಂದ ಶಾಂತವಾಗಿ ಹೊರಬಂದಿದ್ದ ಶೌರ್ಯಕ್ಕೆ ಸಕ್ರೆಬೈಲು ಬಿಡಾರದಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿತ್ತು. ಗಾಯದ ತೀವ್ರತೆಯಿಂದಾಗಿ ಆನೆಯ ಆರೋಗ್ಯ ಸುಧಾರಿಸದೆ, ವೈದ್ಯರು ಹಾಗೂ ಆರೈಕೆ ಸಿಬ್ಬಂದಿಯ ಪ್ರಯತ್ನಗಳ ಹೊರತಾಗಿಯೂ ಅದರ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಆನೆಗಳ ಸಂಖ್ಯೆ 23ಕ್ಕೆ ಇಳಿಕೆ:
ಶೌರ್ಯ ಆನೆಯ ಸಾವಿನಿಂದ ಸಕ್ರೆಬೈಲು ಆನೆ ಬಿಡಾರದಲ್ಲಿರುವ ಒಟ್ಟು ಆನೆಗಳ ಸಂಖ್ಯೆ 23ಕ್ಕೆ ಇಳಿದಿದೆ. ಹಲವು ತಿಂಗಳುಗಳಿಂದ ಗಾಯದ ನೋವಿನಿಂದ ಬಳಲುತ್ತಿದ್ದ ಆನೆಯ ಸಾವು ಆನೆಗಳ ಆರೈಕೆಯಲ್ಲಿ ತೊಡಗಿರುವ ಅರಣ್ಯ ಇಲಾಖೆ ಮತ್ತು ಸಿಬ್ಬಂದಿಗೆ ಮತ್ತೊಂದು ನಷ್ಟವಾಗಿ ಪರಿಣಮಿಸಿದೆ.