



ಡೈಲಿವಾರ್ತೆ:12/ಅ./2026

ಕುಂದಾಪುರದ ಆರಾಟೆಯಲ್ಲಿ ಭೀಕರ ಅಪಘಾತ: ಕಾರು ಡಿಕ್ಕಿಗೆ ಸ್ಕೂಟರ್ ಸವಾರ ಬಲಿ!

ಕುಂದಾಪುರ: ತಾಲೂಕಿನ ಆರಾಟೆ ಸೇತುವೆ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟರ್ ಸವಾರ ಗಂಭೀರಗಾಯಗೊಂಡು ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸದೆ.

ಮೃತರನ್ನು ಕುಂದಾಪುರದ ಅಜಿತ್ ಪೌಲ್ ಲೂಯಿಸ್ ಎಂದು ಗುರುತಿಸಲಾಗಿದೆ.


ಅಜಿತ್ ಪೌಲ್ ಲೂಯಿಸ್ ಅವರು ಕುಂದಾಪುರದಿಂದ ತ್ರಾಸಿ ಕಡೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ, ತ್ರಾಸಿ ಕಡೆಯಿಂದ ಕುಂದಾಪುರದತ್ತ ಬರುತ್ತಿದ್ದ ಕಾರು ನೇರ ಡಿಕ್ಕಿ ಹೊಡೆದಿದೆ. ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದು, ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣ ಸ್ಥಳಕ್ಕೆ ಧಾವಿಸಿದ ಆಪತ್ಬಾಂಧವ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ಮತ್ತು ಅವರ ತಂಡ ಗಾಯಾಳುವನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಆದರೆ, ಗಾಯಾಳುವನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಕುಂದಾಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.