ಡೈಲಿವಾರ್ತೆ:12/ಅ./2026

ಚಿಕ್ಕಮಗಳೂರು: ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯ ಮೇಲೆ ನಿರಂತರ ಅತ್ಯಾಚಾರ ಆರೋಪ; ತಿಂಗಳ ಬಳಿಕ ಬೆಂಗಳೂರಿನಲ್ಲಿ ಆರೋಪಿ ಬಂಧನ

ಚಿಕ್ಕಮಗಳೂರು, ಅ.12: ದೆವ್ವ ಬಿಡಿಸುವುದಾಗಿ ನಂಬಿಸಿ ಮಹಿಳೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪದಡಿ ತಲೆಮರೆಸಿಕೊಂಡಿದ್ದ ಸತೀಶ್ ಪಾತ್ರಿ ಎಂಬಾತನನ್ನು ಕೊಪ್ಪ ಠಾಣೆ ಪೊಲೀಸರು ಬೆಂಗಳೂರಿನ ಜೆ.ಪಿ. ನಗರದಲ್ಲಿ ಬಂಧಿಸಿದ್ದಾರೆ.

ಮೂಢನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಕೊಪ್ಪ ಮತ್ತು ಎನ್.ಆರ್. ಪುರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಸುಮಾರು ಒಂದು ತಿಂಗಳಿನಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊನೆಗೂ ವಶಕ್ಕೆ ಪಡೆಯಲಾಗಿದೆ.

ದೆವ್ವ ಬಿಡಿಸುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ಆರೋಪ:
ಹಾಸನ ಮೂಲದ ಮಹಿಳೆಯೊಬ್ಬರಿಗೆ ದೆವ್ವ ಹಿಡಿದಿದೆ ಎಂದು ನಂಬಿಸಿ, ಅದನ್ನು ಬಿಡಿಸುವ ನೆಪದಲ್ಲಿ ಆರೋಪಿ ಸತೀಶ್ ಪಾತ್ರಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ. ಕೊಪ್ಪ ತಾಲೂಕಿನ ಮೇಕನಹಡ್ಲು ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪ ಹಾಗೂ ತೀರ್ಥಹಳ್ಳಿಯ ಕುದುರೆಗುಂಡಿ ಪ್ರದೇಶಕ್ಕೆ ಮಹಿಳೆಯನ್ನು ಕರೆದೊಯ್ದು ಈ ಕೃತ್ಯ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆ ಕೊಪ್ಪ ಮತ್ತು ಎನ್.ಆರ್. ಪುರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಾದ ಬೆನ್ನಲ್ಲೇ ಆರೋಪಿ ತಲೆಮರೆಸಿಕೊಂಡಿದ್ದ ಎನ್ನಲಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಇದೀಗ ಬೆಂಗಳೂರಿನ ಜೆ.ಪಿ. ನಗರದಲ್ಲಿ ಆರೋಪಿಯನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಸಂತ್ರಸ್ತೆಯ ದೂರಿನ ಆಧಾರದಲ್ಲಿ ಎನ್.ಆರ್. ಪುರ ಪೊಲೀಸ್ ಠಾಣೆಯಲ್ಲಿ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯಡಿ ಹಾಗೂ ಕೊಪ್ಪ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ಅಪ್ರಾಪ್ತ ಬಾಲಕಿಯ ಮೇಲಿನ ಅಮಾನವೀಯ ಕೃತ್ಯದ ಆರೋಪವೂ ವೈರಲ್:
ಸತೀಶ್ ಪಾತ್ರಿ ವಿರುದ್ಧ ಈ ಹಿಂದೆಯೂ ಗಂಭೀರ ಆರೋಪಗಳು ಕೇಳಿಬಂದಿದ್ದವು. ಅಪ್ರಾಪ್ತ ಬಾಲಕಿಯೊಬ್ಬಳಿಗೆ ಭೂತ ಬಿಡಿಸುವ ನೆಪದಲ್ಲಿ ಬಲವಂತವಾಗಿ ಕೋಳಿ ರಕ್ತ ಕುಡಿಯುವಂತೆ ಒತ್ತಾಯಿಸಿದ್ದಾನೆ ಎನ್ನಲಾದ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಘಟನೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಧಾರ್ಮಿಕ ಆಚರಣೆ ಮತ್ತು ಮೂಢನಂಬಿಕೆಯ ಹೆಸರಿನಲ್ಲಿ ಅಮಾಯಕರನ್ನು ವಂಚಿಸಿ, ಅವರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುವ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು.

ಆರೋಪಿಗೆ ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಸೋರಿಕೆ ಆರೋಪ
ಇದೇ ಪ್ರಕರಣದ ಮತ್ತೊಂದು ಗಂಭೀರ ಬೆಳವಣಿಗೆಯಾಗಿ, ತಲೆಮರೆಸಿಕೊಂಡಿದ್ದ ಆರೋಪಿಗೆ ಪೊಲೀಸ್ ಇಲಾಖೆಯೊಳಗಿನಿಂದಲೇ ಮಾಹಿತಿ ಸೋರಿಕೆಯಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಎನ್.ಆರ್. ಪುರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಕಾಂತೇಶ್ ಎಂಬಾತ ಆರೋಪಿಗೆ ಪೊಲೀಸ್ ಕಾರ್ಯಾಚರಣೆಯ ಮಾಹಿತಿಯನ್ನು ರವಾನಿಸುತ್ತಿದ್ದನೆಂದು ಆರೋಪಿಸಲಾಗಿದೆ.

ಪೊಲೀಸರು ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದ್ದ ಮಾಹಿತಿ ಮುಂಚಿತವಾಗಿಯೇ ಆರೋಪಿಗೆ ತಲುಪುತ್ತಿತ್ತು. ಇದರಿಂದ ಆತ ಸ್ಥಳ ಬದಲಾಯಿಸಿ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಈ ಮಾಹಿತಿ ಸೋರಿಕೆ ಆರೋಪ ಬೆಳಕಿಗೆ ಬಂದ ಬೆನ್ನಲ್ಲೇ, ಕರ್ತವ್ಯಲೋಪದ ಆರೋಪದ ಮೇಲೆ ಕಾನ್ಸ್‌ಟೇಬಲ್ ಕಾಂತೇಶ್‌ನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯ್ಮಾ ಅಮಾನತುಗೊಳಿಸಿ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಒಂದೆಡೆ ಮಹಿಳೆಯ ಮೇಲಿನ ಅತ್ಯಾಚಾರದ ಗಂಭೀರ ಆರೋಪ, ಮತ್ತೊಂದೆಡೆ ಅಪ್ರಾಪ್ತ ಬಾಲಕಿಯ ಮೇಲಿನ ಅಮಾನವೀಯ ವರ್ತನೆಯ ಆರೋಪ ಹಾಗೂ ಆರೋಪಿಗೆ ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಸೋರಿಕೆಯಾಗಿರುವ ಶಂಕೆ ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ. ಪ್ರಕರಣದ ಮುಂದಿನ ತನಿಖೆ ಹಾಗೂ ಕಾನೂನು ಕ್ರಮಗಳತ್ತ ಇದೀಗ ಗಮನ ಹರಿದಿದೆ.