




ಡೈಲಿವಾರ್ತೆ:12/ಅ./2026

ಕಾರ್ಕಡದ ಗ್ರೀಷ್ಮಾ ಜಿ. ಇವರಿಗೆ ವಿಟಿಯುನಲ್ಲಿ 9ನೇ ರ‍್ಯಾಂಕ್

ಉಡುಪಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ (ಯುಟಿಯು) ಬಿ.ಇ. (ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್) ಪದವಿಯಲ್ಲಿ ಕಾರ್ಕಡ ಗ್ರಾಮದ ಕುಮಾರಿ ಗ್ರೀಷ್ಮಾ ಜಿ. ಅವರು 9ನೇ ರ‍್ಯಾಂಕ್ ಗಳಿಸುವ ಮೂಲಕ ಗಮನಾರ್ಹ ಶೈಕ್ಷಣಿಕ ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆಯು ಕುಟುಂಬದೊಂದಿಗೆ ಅವರು ವಿದ್ಯಾಭ್ಯಾಸ ಮಾಡಿದ ಶಿಕ್ಷಣ ಸಂಸ್ಥೆಗಳು ಹಾಗೂ ಕಾರ್ಕಡ ಗ್ರಾಮಕ್ಕೆ ಹೆಮ್ಮೆ ತಂದಿದೆ.
ಗ್ರೀಷ್ಮಾ ಅವರು ತಮ್ಮ ನರ್ಸರಿ ಶಿಕ್ಷಣವನ್ನು ಸಾಗರದ ರಾಧಾಕೃಷ್ಣ ಪಬ್ಲಿಕ್ ಸ್ಕೂಲ್‌ನಲ್ಲಿ ಪೂರ್ಣಗೊಳಿಸಿದ್ದು, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ತೆಕ್ಕಟ್ಟೆಯ ವಿಶ್ವವಿನಾಯಕ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ಪಡೆದಿದ್ದಾರೆ. ಬಳಿಕ ಕೋಟದ ವಿವೇಕ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿ, ಬೆಂಗಳೂರಿನ ಆರ್‌ಎನ್‌ಎಸ್ ಕಾಲೇಜಿನಲ್ಲಿ ಬಿ.ಇ. ಪದವಿ ಅಭ್ಯಾಸ ಮಾಡಿದ್ದಾರೆ.
ನಿರಂತರ ಪರಿಶ್ರಮ, ಶಿಸ್ತುಬದ್ಧ ಅಧ್ಯಯನ ಹಾಗೂ ಸಾಧನೆಯ ಛಲದ ಮೂಲಕ ಇಂಜಿನಿಯರಿಂಗ್ ಪದವಿಯಲ್ಲಿ 9ನೇ ರ‍್ಯಾಂಕ್ ಗಳಿಸಿರುವ ಗ್ರೀಷ್ಮಾ, ತಮ್ಮ ಶೈಕ್ಷಣಿಕ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಅವರ ಸಾಧನೆಯು ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಣೆಯಾಗಿದ್ದು, ಅವರು ವಿದ್ಯಾಭ್ಯಾಸ ಮಾಡಿದ ಶಿಕ್ಷಣ ಸಂಸ್ಥೆಗಳಿಗೂ ಕೀರ್ತಿ ತಂದಿದೆ.
ಕಾರ್ಕಡ ಗ್ರಾಮದ ಕೆ. ಚಂದ್ರಶೇಖರ ಸೋಮಾಯಾಜಿ ಮತ್ತು ಪವಿತ್ರ ದಂಪತಿಯ ಪುತ್ರಿಯಾಗಿರುವ ಗ್ರೀಷ್ಮಾ, ಸೆಪ್ಟೆಂಬರ್ 26, 2026ರಂದು ಬೆಳಗಾವಿಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರಿಂದ ರ‍್ಯಾಂಕ್ ಪ್ರಮಾಣಪತ್ರ ಸ್ವೀಕರಿಸಿದ್ದಾರೆ.
ಗ್ರೀಷ್ಮಾ ಅವರ ಈ ಶೈಕ್ಷಣಿಕ ಸಾಧನೆಗೆ ಕುಟುಂಬಸ್ಥರು, ಹಿತೈಷಿಗಳು ಹಾಗೂ ಗ್ರಾಮಸ್ಥರಿಂದ ಅಭಿನಂದನೆಗಳು ವ್ಯಕ್ತವಾಗಿವೆ.