ಡೈಲಿವಾರ್ತೆ:12/ಅ./2026

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವೈಭವದ ನವರಾತ್ರಿ ಉತ್ಸವ: ದಸರಾ ಮಹೋತ್ಸವ ಉದ್ಘಾಟಿಸಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.

ಉಚ್ಚಿಲ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆಶ್ರಯದಲ್ಲಿ ನಡೆಯುತ್ತಿರುವ ಐದನೇ ವರ್ಷದ ‘ಉಡುಪಿ ಉಚ್ಚಿಲ ದಸರಾ-2026’ ಮಹೋತ್ಸವಕ್ಕೆ ಅದ್ದೂರಿ ಚಾಲನೆ ದೊರೆತಿದ್ದು, ಶ್ರೀಕ್ಷೇತ್ರದಲ್ಲಿ ನವರಾತ್ರಿ ಸಂಭ್ರಮ ಕಳೆಗಟ್ಟಿದೆ.

ನಾಡೋಜ ಡಾ. ಜಿ. ಶಂಕರ್ ಅವರ ಸಾರಥ್ಯದಲ್ಲಿ ಅಕ್ಟೋಬರ್ 21ರವರೆಗೆ ನಡೆಯಲಿರುವ ದಸರಾ ಮಹೋತ್ಸವವು ಧಾರ್ಮಿಕ ಆಚರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ವೈಶಿಷ್ಟ್ಯಗಳೊಂದಿಗೆ ಗಮನ ಸೆಳೆಯಲಿದೆ. ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ಸಭಾಂಗಣದಲ್ಲಿ ನಡೆಯುತ್ತಿರುವ ಈ ಉತ್ಸವವನ್ನು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ, ಉಚ್ಚಿಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿದೆ.

ನವರಾತ್ರಿ ಆಂತರಿಕ ಶಕ್ತಿಯ ಜಾಗೃತಿಯ ಪರ್ವ
ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ದೀಪ ಬೆಳಗಿಸುವ ಮೂಲಕ ದಸರಾ ಮಹೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ನವರಾತ್ರಿ ಆಚರಣೆಯು ಕೇವಲ ಧಾರ್ಮಿಕ ಹಬ್ಬಕ್ಕೆ ಸೀಮಿತವಾಗಿಲ್ಲ. ಪ್ರತಿಯೊಬ್ಬ ವ್ಯಕ್ತಿಯೊಳಗಿನ ಧೈರ್ಯ, ಶಕ್ತಿ ಹಾಗೂ ಜ್ಞಾನವನ್ನು ಜಾಗೃತಗೊಳಿಸುವ ದಿವ್ಯ ಪರ್ವವಾಗಿದೆ ಎಂದು ಹೇಳಿದರು.

ದಸರಾ ಮಹೋತ್ಸವವು ಧಾರ್ಮಿಕ ಪರಂಪರೆಯೊಂದಿಗೆ ಸಾಂಸ್ಕೃತಿಕ ವೈಭವವನ್ನು ಜನರಿಗೆ ಪರಿಚಯಿಸುವ ಮಹತ್ವದ ವೇದಿಕೆಯಾಗಿದ್ದು, ಇಂತಹ ಉತ್ಸವಗಳು ಸಮಾಜದಲ್ಲಿ ಸೌಹಾರ್ದತೆ ಹಾಗೂ ಸಾಂಸ್ಕೃತಿಕ ಪ್ರಜ್ಞೆಯನ್ನು ಬಲಪಡಿಸಲು ಸಹಕಾರಿಯಾಗುತ್ತವೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉಡುಪಿ ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ ಮೂಳೂರು, ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಕವಿತಾ ಶರತ್, ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂದರ್ ಮಲ್ಪೆ, ನಾಲ್ಕುಪಟ್ಟ ಮೊಗವೀರ ಸಂಘದ ಅಧ್ಯಕ್ಷ ಮನೋಜ್ ಕಾಂಚನ್, ಮಹಿಳಾ ಸಂಘದ ಅಧ್ಯಕ್ಷೆ ಸುಗುಣ ಕರ್ಕೇರ, ಶ್ರೀಪತಿ ಭಟ್ ಉಚ್ಚಿಲ, ದಿನೇಶ್ ಎರ್ಮಾಳು, ವಾಸುದೇವ ಸಾಲ್ಯಾನ್, ಗುಂಡು ಬಿ. ಅಮೀನ್, ರತ್ನಾಕರ ಸಾಲ್ಯಾನ್ ಮಲ್ಪೆ, ವಿಶ್ವಾಸ್ ಅಮೀನ್ ಹಾಗೂ ದೇವಳದ ಪ್ರಬಂಧಕ ಸತೀಶ್ ಅಮೀನ್ ಪಡುಕೆರೆ ಉಪಸ್ಥಿತರಿದ್ದರು.

ಅಕ್ಟೋಬರ್ 21ರವರೆಗೆ ನಡೆಯಲಿರುವ ಉಡುಪಿ ಉಚ್ಚಿಲ ದಸರಾ-2026 ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಕ್ತರು ಮತ್ತು ಸಾರ್ವಜನಿಕರನ್ನು ಆಕರ್ಷಿಸಲಿದೆ.