




ಡೈಲಿವಾರ್ತೆ:12/ಅ./2026

ಕಾರ್ಕಳ: ಕಾಂಗ್ರೆಸ್ ಯುವ ನಾಯಕನಿಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ – ಆರೋಪಿ ಕೃಷ್ಣ ನಾಯ್ಕ ಬಂಧನ

ಹೆಬ್ರಿ: ಕಾರ್ಕಳ ಕಾಂಗ್ರೆಸ್ ಯುವ ನಾಯಕ ಇನ್ನಾ ಯೋಗೀಶ್ ಆಚಾರ್ಯ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಹೆಬ್ರಿ ತಾಲೂಕಿನ ಚಾರ ಗ್ರಾಮದ ಕೃಷ್ಣ ನಾಯ್ಕ ಎಂಬಾತನನ್ನು ಹೆಬ್ರಿ ಪೊಲೀಸರು ಭಾನುವಾರ ತಡರಾತ್ರಿ ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಯೋಗೀಶ್ ಆಚಾರ್ಯ ಅವರನ್ನು ಉದ್ದೇಶಿಸಿ, “ನಿನ್ನ ದುರಂತ ಸಾವು ಮುಂದಿದೆ… ಜಾಗ್ರತೆ ಮಾಡು…” ಎಂಬ ಬೆದರಿಕೆಯ ಸಂದೇಶವನ್ನು ಕೃಷ್ಣ ನಾಯ್ಕ ಹಾಕಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧನದ ಬಳಿಕ ಅನಾರೋಗ್ಯದ ಕಾರಣ ನೀಡಿ ಕೃಷ್ಣ ನಾಯ್ಕ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ತಿಳಿದುಬಂದಿದೆ.
ಹಿಂದೆಯೂ ವಿವಾದಾತ್ಮಕ ಪೋಸ್ಟ್ ಆರೋಪ:
ಚಾರ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷನಾಗಿದ್ದ ಕೃಷ್ಣ ನಾಯ್ಕ, ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಅವಹೇಳನಕಾರಿ ಹೇಳಿಕೆ ಪ್ರಕಟಿಸಿದ್ದ ಆರೋಪವೂ ಕೇಳಿಬಂದಿತ್ತು. ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ತಿಳಿದುಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಗಳ ವಿರುದ್ಧ ಬೆದರಿಕೆ ಹಾಗೂ ಪ್ರಚೋದನಕಾರಿ ಹೇಳಿಕೆಗಳನ್ನು ಪ್ರಕಟಿಸುವ ಪ್ರಕರಣಗಳು ಮತ್ತೆ ಚರ್ಚೆಗೆ ಗ್ರಾಸವಾಗಿದ್ದು, ಪ್ರಸಕ್ತ ಪ್ರಕರಣದ ಕುರಿತು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.