ಡೈಲಿವಾರ್ತೆ:21/ಅ./2026

ಪಾಂಡೇಶ್ವರ ಶಾರದೋತ್ಸವ ಮಾದರಿಯಾಗಲಿ- ಸಂಪತ್ ಕುಮಾರ್ ಶೆಟ್ಟಿ

ಕೋಟ:ಪಾಂಡೇಶ್ವರದಲ್ಲಿ ಜರಗಿದ ಶಾರದೋತ್ಸವ ಕಾರ್ಯಕ್ರಮ ಇಡೀ ವ್ಯವಸ್ಥೆ ಮಾದರಿಯಾಗಿದೆ ಎಂದು ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ಪ್ರವರ್ತಕ ಸಂಪತ್ ಕುಮಾರ್ ಶೆಟ್ಟಿ ಹೇಳಿದರು.

ಮಂಗಳವಾರ ಪಾಂಡೇಶ್ವರ ಶಾಲಾ ವಠಾರದಲ್ಲಿ ಶಾರದೋತ್ಸವ ಸಮಿತಿ ಪಾಂಡೇಶ್ವರ ಇವರ ಆಶ್ರಯದಲ್ಲಿ ಪಾಂಡೇಶ್ವರ ಶಾರದೋತ್ಸವ -2026ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸರ್ವಧರ್ಮಗಳನ್ನು ಒಗ್ಗೂಡಿಸಿಕೊಂಡು ಆಚರಿಸುತ್ತಿರುವ ಶಾರದೋತ್ಸವ ಅರ್ಥಪೂರ್ಣ ಆಚರಣೆಗೆ ಮುನ್ನುಡಿ ಬರೆದಿದೆ. ಯುವ ಜನಾಂಗ ಉದ್ಯಮ ಕ್ಷೇತ್ರಕ್ಕೆ ಮುನ್ನಗ್ಗಲಿ ಆ ಮೂಲಕ ಗ್ರಾಮೀಣ ಹಳ್ಳಿ ಭಾಗದಲ್ಲಿ ಉದ್ಯೋಗ ಸೃಷ್ಠಿಯ ಮೂಲಕ ಕ್ರಾಂತಿಕಾರಿ ಹೆಜ್ಜೆ ಇರಿಸಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಸಮಾಜಸೇವಕ ನಿತ್ಯಾನಂದ ಒಳಕಾಡು, ಹಿರಿಯ ಕೃಷಿಕ ಗೋವಿಂದ ಪೂಜಾರಿ, ಶಿಕ್ಷಕ ಸುನೀಲ್ ಪಾಂಡೇಶ್ವರ ಇವರನ್ನು ಗುರುತಿಸಿ ಗೌರವಿಸಲಾಯಿತು‌.

ಶಾರದೋತ್ಸವ ಅಂಗವಾಗಿ ಹಮ್ಮಿಕೊಂಡ ವಿವಿಧ ಕ್ರೀಡಾ ಹಾಗೂ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಸಭಾಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಚಂದ್ರಮೋಹನ್ ಪೂಜಾರಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸಾಸ್ತಾನ ಅಂತೋನಿ ಚರ್ಚ ಫಾದರ್ ಸುನೀಲ್ ಡಿಸಿಲ್ವಾ ಉಪಸ್ಥಿತರಿದ್ದರು. ಸಮಿತಿಯ ಗೌರವಾಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮವನ್ನು ಸಮಿತಿಯ ಉಪಾಧ್ಯಕ್ಷ ಅಲ್ವಿನ್ ಆಂದ್ರಾದೆ ನಿರೂಪಿಸಿ ವಂದಿಸಿದರು. ಉಷಾಗಣೇಶ್, ಕಾರ್ಯದರ್ಶಿ ದಿನಕರ್ ಬಹುಮಾನ ಹಾಗೂ ವರದಿ ವಾಚಿಸಿದರು.ಕೋಶಾಧಿಕಾರಿ ವಿಶ್ವನಾಥ ಆಚಾರ್ ಸಹಕರಿಸಿದರು. ವಿಜಯದಶಮಿ ಅಂಗವಾಗಿ ಚಂಡಿಕಾಯಾಗ, ಮಹಾಪೂಜೆ,ಪ್ರಸಾದ ವಿತರಣೆ, ಶ್ರೇಯಾ ನಾಗರಾಜ್ ಇವರಿಂದ ಭಕ್ತಿಗಾನ ಕಾರ್ಯಕ್ರಮ,ಮಹಾಅನ್ನಸಂತರ್ಪಣೆ ಜರಗಿತು.