




ಡೈಲಿವಾರ್ತೆ:22/ಅ./2026

ಮೂಡುಬಿದಿರೆ: ವಿದ್ಯುತ್ ತಂತಿ ಸ್ಪರ್ಶಿಸಿ ಅವಘಡ – ತಾಯಿ, ಮಗ ದಾರುಣ ಸಾವು

ಮೂಡುಬಿದಿರೆ: ಬಟ್ಟೆ ಒಣಗಿಸಲು ಹಾಕಿದ್ದ ಕಬ್ಬಿಣದ ತಂತಿಗೆ ವಿದ್ಯುತ್ ಪ್ರವಹಿಸಿದ ಪರಿಣಾಮ ತಾಯಿ ಮತ್ತು ಮಗ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಮೂಡುಬಿದಿರೆ ಸಮೀಪದ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಣಬೆಟ್ಟುವಿನಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಮೃತರನ್ನು ವರ್ಣಬೆಟ್ಟುವಿನ ನಿವಾಸಿ ಮರ್ಸಿ ಮಸ್ಕರೇನಸ್ (45) ಹಾಗೂ ಅವರ ಪುತ್ರ, 18 ವರ್ಷದ ಶೋನ್ ಮಸ್ಕರೇನಸ್ ಎಂದು ಗುರುತಿಸಲಾಗಿದೆ. ಶೋನ್ ಮೂಡುಬಿದಿರೆಯ ಹೋಲಿ ರೋಸರಿ ಶಾಲೆಯ ವಿದ್ಯಾರ್ಥಿಯಾಗಿದ್ದನು.
ಗುರುವಾರ ಬೆಳಿಗ್ಗೆ ಸುಮಾರು 7ರಿಂದ 8 ಗಂಟೆಯ ನಡುವೆ ಮನೆಯಲ್ಲಿ ಬಟ್ಟೆ ಒಣಗಿಸಲು ತೆರಳಿದ್ದ ಶೋನ್, ಕಬ್ಬಿಣದ ತಂತಿಗೆ ವಿದ್ಯುತ್ ಪ್ರವಹಿಸಿದ್ದರಿಂದ ಆಘಾತಕ್ಕೆ ಒಳಗಾಗಿದ್ದಾನೆ ಎನ್ನಲಾಗಿದೆ. ಬಟ್ಟೆ ಒಣಗಿಸುವ ತಂತಿಗೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿದ್ದೇ ಅವಘಡಕ್ಕೆ ಕಾರಣವೆಂದು ಪ್ರಾಥಮಿಕವಾಗಿ ತಿಳಿದುಬಂದಿದೆ.
ಮಗ ವಿದ್ಯುತ್ ಆಘಾತಕ್ಕೆ ಒಳಗಾಗಿರುವುದನ್ನು ಗಮನಿಸಿದ ತಾಯಿ ಮರ್ಸಿ, ಆತನನ್ನು ರಕ್ಷಿಸುವ ಉದ್ದೇಶದಿಂದ ತಕ್ಷಣ ಧಾವಿಸಿದ್ದಾರೆ. ಆದರೆ, ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯ ಸಂಪರ್ಕಕ್ಕೆ ಬಂದ ಪರಿಣಾಮ ಅವರಿಗೂ ತೀವ್ರ ವಿದ್ಯುತ್ ಆಘಾತ ತಗುಲಿದೆ. ಘಟನೆಯಲ್ಲಿ ತಾಯಿ ಮತ್ತು ಮಗ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮನೆ ಸಮೀಪ ತೋಟದ ಕೆಲಸಕ್ಕೆ ಬಂದಿದ್ದ ಕಾರ್ಮಿಕರೊಬ್ಬರು ಘಟನೆಯನ್ನು ಗಮನಿಸಿದ ಬಳಿಕ ಈ ದುರಂತ ಬೆಳಕಿಗೆ ಬಂದಿದೆ. ಒಂದೇ ಕುಟುಂಬದ ಇಬ್ಬರು ಸದಸ್ಯರು ವಿದ್ಯುತ್ ಅವಘಡದಲ್ಲಿ ಮೃತಪಟ್ಟಿರುವುದು ಸ್ಥಳೀಯರಲ್ಲಿ ದುಃಖ ಮೂಡಿಸಿದೆ.
ಮಾಹಿತಿ ತಿಳಿದ ತಕ್ಷಣ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.