ಡೈಲಿವಾರ್ತೆ:22/ಅ./2026

ಕುಂದಾಪುರ: ವಕ್ವಾಡಿಯಲ್ಲಿ ಮಣ್ಣು ಸಾಗಾಟದ ವಿಚಾರಕ್ಕೆ ನಿಂದನೆ, ಗಲಾಟೆ ಆರೋಪ – ಇಬ್ಬರ ವಿರುದ್ಧ ಪ್ರಕರಣ ದಾಖಲು

ಕುಂದಾಪುರ, ಅ.22: ಪಟ್ಟ ಜಾಗದ ಮಣ್ಣನ್ನು ಸಾಗಿಸುತ್ತಿದ್ದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರೊಂದಿಗೆ ವಾಗ್ವಾದ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇರೆಗೆ ಇಬ್ಬರ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಕ್ವಾಡಿ ಗ್ರಾಮದ ಅರೆಕಲ್ಲು ಮನೆ ನಿವಾಸಿ, 48 ವರ್ಷದ ಉದ್ಯಮಿ ವಿ. ಸಂಪತ್ ಕುಮಾರ್ ಅವರು ನೀಡಿದ ದೂರಿನ ಆಧಾರದಲ್ಲಿ ಸತ್ಯರಂಜನ್ ಹೆಗ್ಡೆ (62) ಮತ್ತು ಸಾತ್ವಿಕ್ ಹೆಗ್ಡೆ (31) ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

ಪೊಲೀಸ್ ದಾಖಲೆಯ ಪ್ರಕಾರ, ಅ.8ರಂದು ಸಂಜೆ 5.30ರಿಂದ 5.35ರ ಅವಧಿಯಲ್ಲಿ ವಕ್ವಾಡಿ ಗ್ರಾಮದ ಕಳಸಂಕ ತೋಡು ಸಮೀಪ ಈ ಘಟನೆ ನಡೆದಿದೆ ಎನ್ನಲಾಗಿದೆ. ಪಟ್ಟ ಜಾಗದ ಮಣ್ಣನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಯಾವುದೇ ಸಂಬಂಧ ಇಲ್ಲದ ಇಬ್ಬರು ವ್ಯಕ್ತಿಗಳು ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರೊಂದಿಗೆ ವಾಗ್ವಾದ ನಡೆಸಿ ನಿಂದಿಸಿದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಅ.13ರಂದು ದೂರು ಸ್ವೀಕರಿಸಿದ ಪೊಲೀಸರು, ನ್ಯಾಯಾಲಯದ ಅನುಮತಿ ಪಡೆದು ಅಪರಾಧ ಸಂಖ್ಯೆ 87/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) 2023ರ ಕಲಂ 352, 114 ಹಾಗೂ 3(5)ರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ತಿಳಿದುಬರಬೇಕಿದೆ.